ಮಡಿಕೇರಿ, ಜೂ. 29 : ಖಾಸಗಿ ವಾಹನಗಳು ಸೇರಿದಂತೆ ಬಾಡಿಗೆ ಹಾಗೂ ಸರಕು ಸಾಗಣೆ ವಾಹನಗಳಲ್ಲಿ ಜನರು ಹಾಗೂ ಶಾಲಾ ಮಕ್ಕಳನ್ನು ಸಾಗಾಟ ಮಾಡುವ ವಾಹನಗಳಿಗೆ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಪ್ರಾಧಿಕಾರ ‘ಬ್ರೇಕ್’ ಹಾಕಿದೆ. ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಆಧಾರದಲ್ಲಿ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಇಲಾಖೆಗಳು ದಿಢೀರ್ ಕ್ರಮಕ್ಕೆ ಮುಂದಾಗಿದ್ದು, ಶಾಲಾ ಮಕ್ಕಳನ್ನು ಸಾಗಾಟ ಮಾಡುವ ವಾಹನಗಳ ಮೇಲೆ ಮೊಕದ್ದಮೆ, ದಂಡ ವಿಧಿಸಲಾಗುತ್ತಿದೆ. ಇದರಿಂದಾಗಿ ವಾಹನಗಳನ್ನು ಆಶ್ರಯಿಸಿದ ಪೋಷಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಇತ್ತ ಇದನ್ನೇ ಜೀವಾನಾಧಾರದ ದುಡಿಮೆಯನ್ನಾಗಿ ಆಶ್ರಯಿಸಿಕೊಂಡಿರುವ ವಾಹನ ಮಾಲೀಕರು, ಚಾಲಕರ ಪರಿಸ್ಥಿತಿ ಡೋಲಾಯಮಾನವಾಗಿದೆ.ಹಿತಾಸಕ್ತಿ ಅರ್ಜಿ : ಸರಕು ಸಾಗಾಣಿಕೆ ವಾಹನಗಳಲ್ಲಿ ಜನರನ್ನೂ ಸಾಗಾಟಗೊಳಿಸುತ್ತಿರುವದು ಹಾಗೂ ಆಟೋರಿಕ್ಷಾಗಳಲ್ಲಿ ಮಿತಿಗಿಂತ ಹೆಚ್ಚಾಗಿ ಜನರು ಹಾಗೂ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದು, ಇದರಿಂದಾಗಿ ಅವಘಡಗಳಾಗುತ್ತಿವೆ. ಈ ಬಗ್ಗೆ ರಾಜ್ಯ ಸರಕಾರ ಕೈಗೊಂಡಿರುವ ಕ್ರಮದ ಬಗ್ಗೆ ಪ್ರಶ್ನಿಸಿ ರಾಜ್ಯ ವಕೀಲರ ಪರಿಷತ್ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ (ಅರ್ಜಿ ಸಂಖ್ಯೆ 12/181/2019) ಅರ್ಜಿಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಾರಿಗೆ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆಯನ್ನು ಪ್ರತಿವಾದಿಗಳನ್ನಾಗಿ ಪರಿಗಣಿಸಿ, ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಕೆಲವು ಅವಘಡಗಳು, ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಾಗಾಟ ಮಾಡುತ್ತಿರುವ ಭಾವಚಿತ್ರಗಳನ್ನು ಲಗತ್ತಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಬಗ್ಗೆ ಕ್ರಮ ಕೈಗೊಂಡು ಸೂಕ್ತ ವರದಿ ಸಲ್ಲಿಸುವಂತೆ ಸರಕಾರಕ್ಕೆ ಆದೇಶಿಸಿದೆ. ಹಾಗಾಗಿ ಸರಕಾರ ಕಳೆದ ತಾ. 30.4.19 ಹಾಗೂ 12.6.19ರಂದು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ಸಾರಿಗೆ ಪ್ರಾಧಿಕಾರ ಕಚೇರಿಗಳಿಗೆ ಮೋಟಾರು ವಾಹನ ಕಾಯ್ದೆ ಹಾಗೂ ಪೊಲೀಸ್ ಇಲಾಖೆ ಕಾಯ್ದೆ ಪ್ರಕಾರ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿದೆ. ಈ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯ ಕೇಂದ್ರ ಮಡಿಕೇರಿಯಲ್ಲಿ ಎರಡು ಇಲಾಖೆಗಳು ಕಾರ್ಯಾಚರಣೆಗೆ ಇಳಿದಿದೆ.
ವರದಿಗಾಗಿ ಕ್ರಮ : ವಕೀಲರ ಪರಿಷತ್ತು ಸಲ್ಲಿಸಿರುವ ಅರ್ಜಿಯ ವಿಚಾರಣೆ ತಾ. 13ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸರಕಾರ ತಾ. 12ರ ಒಳಗಾಗಿ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದು, ದಂಡ ವಿಧಿಸ ತೊಡಗಿದ್ದಾರೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳನ್ನೇ ಕೇಂದ್ರೀಕರಿಸಿಕೊಂಡು ಕ್ರಮ ಜರುಗಿಸಲಾಗುತ್ತಿದ್ದು, ವಾಹನಗಳ ಫೋಟೋ ಹಾಗೂ ವೀಡಿಯೋ ಚಿತ್ರೀಕರಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತಿರುವದು ಮಾಹಿತಿಯನ್ವಯ ತಿಳಿದುಬಂದಿದೆ.
(ಮೊದಲ ಪುಟದಿಂದ)
ಎಷ್ಟು ಮಂದಿಗೆ ಅವಕಾಶ : ಯಾವದೇ ವಾಹನಗಳಲ್ಲಿ ವಾಹನಗಳ ಪರವಾನಗಿಯಲ್ಲಿ ನಿಗದಿಪಡಿಸಿರುವ ಸಂಖ್ಯೆಗನುಗುಣವಾಗಿ ಜನರನ್ನು, ಮಕ್ಕಳನ್ನು ಕರೆದೊಯ್ಯಬೇಕಿದೆ. 12 ವರ್ಷಕ್ಕೆ ಮೇಲ್ಪಟ್ಟವರಾದರೆ ನಿಗದಿತ ಸಂಖ್ಯೆಯಷ್ಟೆ ಮಂದಿಯನ್ನು ಕರೆದೊಯ್ಯಬೇಕಿದೆ. 12 ವರ್ಷಕ್ಕಿಂತ ಕೆಳಗಿನ ಮಕ್ಕಳಾದರೆ ನಿಗದಿತ ಮಿತಿಗಿಂತ ದುಪ್ಪಟ್ಟು ಮಕ್ಕಳನ್ನು ಕರೆದೊಯ್ಯಬಹುದಾಗಿದೆ. ಉದಾಹರಣೆಗೆ ಆಟೋರಿಕ್ಷವಾದರೆ 6, ಮಾರುತಿ ವ್ಯಾನ್ನಲ್ಲಿ 16 ಹೀಗೆ..., ಮಿತಿಗಿಂತ ಹೆಚ್ಚಿಗೆ ಮಕ್ಕಳನ್ನು ಸಾಗಿಸಿದರೆ ದಂಡ ವಿಧಿಸಲಾಗುವದೆಂಬ ಮಾಹಿತಿ ಇಲಾಖೆಗಳಿಂದ ಲಭ್ಯವಾಗಿದೆ. ಸರಕು ಸಾರಿಗೆ ವಾಹನಗಳಲ್ಲಿ ಜನರನ್ನು ಸಾಗಿಸುವಂತೆ ಇಲ್ಲ.
ಎಷ್ಟು ದಂಡ : ವಾಹನಗಳಿಗೆ ನೀಡಲಾಗಿರುವ ನಿಗದಿತ ಮಿತಿಗಿಂತ ಹೆಚ್ಚಿಗೆ ಜನರು ಹಾಗೂ ಮಕ್ಕಳನ್ನು ಸಾಗಿಸಿದರೆ ಪ್ರತಿ ವ್ಯಕ್ತಿ ಹಾಗೂ ಮಗುವಿಗೆ ರೂ. 100 ದಂಡ ವಿಧಿಸಲಾಗುವದು. ಮೊದಲ ಬಾರಿಗೆ ರೂ. 100 ವಿಧಿಸಲಿದ್ದು, ಎರಡನೇ ಬಾರಿಗೂ ಹೆಚ್ಚಿಗೆ ಇದ್ದರೆ ದಂಡ ದುಪ್ಪಟ್ಟುವಾಗಲಿದೆ. ಸಾರಿಗೆ ಪ್ರಾಧಿಕಾರದ ನಿಯಮಾನುಸಾರ ಪ್ರತಿ ವ್ಯಕ್ತಿಗೆ ಮೊದಲ ಬಾರಿಗೆ ರೂ. 30 ಹಾಗೂ ಎರಡನೇ ಬಾರಿಗೆ ರೂ. 60ರಂತೆ ದಂಡ ವಿಧಿಸಲಾಗುವದು.
ತಾ. 12ರವರೆಗೆ ಗಡುವು : ಈ ನಿಟ್ಟಿನಲ್ಲಿ ಆರ್ಟಿಓ, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಸಭೆ ನಡೆಸಿದೆ. ಸಭೆಯಲ್ಲಿ ಸರಕಾರದ ನಿಯಮಾವಳಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ಚಾಲಕರುಗಳು ಪಾಲಿಸಬೇಕಾದ ನಿಯಮಗಳನ್ನು ಮತ್ತೆ ವಿವರಿಸಲಾಗಿದೆ. ಇದೀಗ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಜು. 12ರವರೆಗೆ ಈ ಜಾಗೃತಿ ಕಾರ್ಯ ನಡೆಯಲಿದೆ. ಅಷ್ಟರೊಳಗಡೆ ಹೆಚ್ಚಿಗೆ ಮಕ್ಕಳನ್ನು ಸಾಗಿಸುವವರು ಗಮನ ಹರಿಸಿ, ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ವೈಟ್ ಬೋರ್ಡ್ ವಾಹನಗಳನ್ನು ಹಳದಿ ಬೋರ್ಡ್ಗೆ ಮಾರ್ಪಡಿಸಲು ಅವಕಾಶ ನೀಡಲಾಗಿದೆ. ನಂತರದಲ್ಲು ಇದನ್ನು ಪಾಲಿಸದಿದ್ದಲ್ಲಿ ಚಾಲಕನ ಪರವಾನಗಿ, ವಾಹನದ ಪರವಾನಗಿಗಳನ್ನು ರದ್ದುಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವದೆಂದು ಸಂಚಾರಿ ಪೊಲೀಸ್ ಪ್ರಬಾರ ಠಾಣಾಧಿಕಾರಿಯಾಗಿರುವ ನಗರ ಠಾಣಾಧಿಕಾರಿ ಷಣ್ಮುಗಂ ಮಾಹಿತಿ ನೀಡಿದ್ದಾರೆ.
ವಾಹನ ಸಂಚಾರ ಸ್ಥಗಿತ : ಇಲಾಖೆಗಳ ದಿಢೀರ್ ಕ್ರಮಗಳಿಂದಾಗಿ ಈಗಾಗಲೇ ಬಹುತೇಕ ಖಾಸಗಿ ವಾಹನಗಳು ಮಕ್ಕಳನ್ನು ಕರೆದೊಯ್ಯುವದನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಅತಂತ್ರ ಸ್ಥಿತಿಗೆ ಸಿಲುಕಿದಂತಾಗಿದೆ. ಬಹುತೇಕ ಶಾಲೆಗಳಲ್ಲಿ ಶಾಲಾ ವಾಹನಗಳ ಸೌಕರ್ಯವಿಲ್ಲ. ಹಾಗಾಗಿ ಪೋಷಕರು ಅನಿವಾರ್ಯವಾಗಿ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ಆದರೆ ಇದೀಗ ಆರ್ಟಿಓ ಇಲಾಖೆಯವರು ವಾಹನಗಳ ಮೇಲೆ ರೂ. 7 ರಿಂದ 10 ಸಾವಿರದಷ್ಟು ದಂಡ ವಿಧಿಸುವದಲ್ಲದೆ, ವಾಹನಗಳನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ನೋಟೀಸ್ ನೀಡುತ್ತಿರುವದರಿಂದ ವಾಹನ ಸಂಚಾರವನ್ನೇ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು, ಪೋಷಕರು, ಮಕ್ಕಳು ಹಾಗೂ ವಾಹನ ಚಾಲಕರ ಜೀವನೋಪಾಯದ ಹಿತದೃಷ್ಟಿಯಿಂದ ಮರು ಪರಿಶೀಲಿಸಿ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಪೋಷಕರಿಗೆ ಸಂಕಷ್ಟ : ಉದ್ಯೋಗದಲ್ಲಿರುವವರು, ಗ್ರಾಮೀಣ ಪ್ರದೇಶದಲ್ಲಿರುವ ಪೋಷಕರಿಗೆ ಇದೀಗ ಸಂಕಷ್ಟ ಎದುರಾಗಿದೆ. ಈಗಾಗಲೇ ವಾಹನ ಸೌಲಭ್ಯಗಳನ್ನು ನೋಡಿಕೊಂಡು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ. ಆದರೆ ಇದೀಗ ಇಲಾಖೆಗಳ ದಿಢೀರ್ ಕ್ರಮದಿಂದ ವಾಹನಗಳು ಸಂಚರಿಸಲು ಅಡ್ಡಿಯಾದಂತಾಗಿದ್ದು, ತಮ್ಮ ಮಕ್ಕಳನ್ನು ಕಳುಹಿಸುವದಾದರೂ ಹೇಗೆ ? ಎಂಬ ಚಿಂತೆಯಲ್ಲಿದ್ದಾರೆ. ಮಳೆಗಾಲದಲ್ಲಂತೂ ಋಣಭಾರದ ಶಾಲಾ ಬ್ಯಾಗ್ಗಳನ್ನು ಹೊತ್ತು ಕೊಡೆ ಹಿಡಿದು ಮಕ್ಕಳು ನಡೆದು ಹೋಗುವದಂತೂ ಅಸಾಧ್ಯದ ಮಾತು. ಇತ್ತ ಪೋಷಕರಿಗೂ ಕರೆದೊಯ್ಯಲು ಸಾಧ್ಯವಿಲ್ಲದ ಪರಿಸ್ಥಿತಿ !
ಕಾಡಾನೆ ಕಾಟ : ನಗರ ಪ್ರದೇಶಗಳಲ್ಲಿ ಹೇಗೋ ಆದೀತೆನ್ನಬಹದು. ಆದರೆ ಗ್ರಾಮೀಣ ಭಾಗಗಳ ಮಕ್ಕಳ ಪರಿಸ್ಥಿತಿ ಮಾತ್ರ ಶೋಚನೀಯವಾಗಲಿದೆ. ತಿಂಗಳಿಗೆ ಇಂತಿಷ್ಟು ಎಂದು ಅತಿ ಕಡಿಮೆ ದರದಲ್ಲಿ ಖಾಸಗಿ ವಾಹನಗಳು ಮಕ್ಕಳನ್ನು ಕರೆದೊಯ್ಯುತ್ತಿವೆ. ಇನ್ನೂ ವಾಹನ ಸಂಚಾರ ಸ್ಥಗಿತಗೊಂಡರೆ ಪ್ರತಿನಿತ್ಯ ಬಾಡಿಗೆ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸಬೇಕಾಗುತ್ತದೆ. ಇದೂ ಪೋಷಕರಿಗೆ ದೊಡ್ಡ ಹೊರೆಯಾಗಲಿದೆ. ಅಲ್ಲದೆ ಗ್ರಾಮೀಣ ಪ್ರದೇಶದ ಕಾಡು ಪ್ರದೇಶಗಳಲ್ಲಿ ಒಂದೇ ವಾಹನದಲ್ಲಿ ಎಲ್ಲ ಮಕ್ಕಳು ಒಟ್ಟಾಗಿ ಹೋಗಿ ಬರಬಹುದಾಗಿದೆ. ಇದೀಗ ಒಬ್ಬೊಬ್ಬರಾಗಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಕಾಡಾನೆಗಳ ಕಾಟ ಕೂಡ ಅಧಿಕವಾಗಿದೆ. ಈ ಬಗ್ಗೆಯೂ ಇಲ್ಲಿ ಚಿಂತಿಸಬೇಕಾಗಿದೆ.
ಶಾಲಾ ವಾಹನಗಳ ಮೇಲಿನ ಧಾಳಿ ದೊಡ್ಡ ಸಮಸ್ಯೆಯಾಗಿಯೇ ಪರಿಣಮಿಸಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ, ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ನಗರ ಪ್ರದೇಶಗಳಲ್ಲಿರುವ ಹಾಗೆ ಸಾಕಷ್ಟು ವಾಹನಗಳ ಸಂಚಾರವೂ ಇಲ್ಲ. ಹಾಗಾಗಿ ಲಭ್ಯವಿರುವ ವಾಹನಗಳನ್ನೇ ಪೋಷಕರು ಅವಲಂಬಿಸಬೇಕಾಗಿದೆ. ಇಲಾಖೆಗಳು ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಆದರೆ ಪರಿಣಾಮ ಮಕ್ಕಳ ಮೇಲಾಗುತ್ತಿದೆ. ಈ ಸಮಸ್ಯೆಗೆ ಪರಸ್ಪರ ದೀರ್ಘ ಸಮಲೋಚನೆ ಮೂಲಕ ಸೌಹಾರ್ದಯುತ ಪರಿಹಾರ ಕಂಡುಕೊಳ್ಳವದು ಒಳಿತೆಂಬದು ಸಾರ್ವಜನಿಕ ಅಭಿಪ್ರಾಯವಾಗಿದೆ.