ಮಡಿಕೇರಿ, ಜೂ. 29: ಹವಾಮಾನ ಇಲಾಖೆಯ ವರದಿಯಂತೆ ಮುಂಗಾರು ಮಳೆ ಚುರುಕುಗೊಳ್ಳುವ ಸೂಚನೆ ಹಿನ್ನೆಲೆ; ಈಗಾಗಲೇ ಮಡಿಕೇರಿಯಲ್ಲಿ ಬೀಡುಬಿಟ್ಟಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ ಎನ್‍ಡಿಆರ್‍ಎಫ್ ತಂಡ ಇಂದು ವಿವಿಧೆಡೆಗಳಲ್ಲಿ ತೆರಳಿ ಮಳೆ ತೀವ್ರಗೊಂಡರೆ ಎದುರಾಗಬ ಹುದಾದ ಅಪಾಯದ ತಡೆಗಾಗಿ ಪರಿಶೀಲನೆ ನಡೆಸಿತು.ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಅವರ ಸಲಹೆ ಮೇರೆಗೆ ಕಳೆದ ಮುಂಗಾರುವಿನಲ್ಲಿ ಮಂಗಳೂರು ಹೆದ್ದಾರಿಯ ಅಲ್ಲಲ್ಲಿ ಸಂಭವಿಸಿದ್ದ ಭೂಕುಸಿತ ಪ್ರದೇಶಗಳನ್ನು ಈ ತಂಡ ವೀಕ್ಷಣೆ ನಡೆಸಿತು. ಅಲ್ಲದೆ, ನಗರದ ಚಾಮುಂಡೇಶ್ವರಿ ನಗರ, ಇಂದಿರಾನಗರ, ಮಂಗಳಾದೇವಿನಗರ, ಪುಟಾಣಿ ನಗರ ಸೇರಿದಂತೆ ಕಳೆದ ವರ್ಷ ಅಪಾಯ ಎದುರಾಗಿದ್ದ ಸ್ಥಳಗಳ ಪರಿಶೀಲನೆ ನಡೆಸಲಾಯಿತು.ಈ ವೇಳೆ ಕೇಂದ್ರದ ಎನ್‍ಡಿಆರ್‍ಎಫ್ (ಮೊದಲ ಪುಟದಿಂದ) 10ನೇ ಬೆಟಾಲಿಯನ್‍ಗೆ ಸಂಬಂಧಿಸಿದ ಮುಖ್ಯಾಧಿಕಾರಿ ಆರ್.ಪಿ. ಚೌದರಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ, ಕೊಡಗು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಳೆಗಾಲದ ಪರಿಸ್ಥಿತಿ ಎದುರಿಸಲು ಕಾರ್ಯಾಚರಣೆಗೆ ಸದಾ ಸನ್ನದ್ಧವಿರುವದಾಗಿ ತಿಳಿಸಿದರು.
ಈಗಾಗಲೇ ಗಾಳಿಬೀಡು, ಮುಕ್ಕೋಡ್ಲು, 2ನೇ ಮೊಣ್ಣಂಗೇರಿ, ಮಕ್ಕಂದೂರು, ಕಾಂಡನಕೊಲ್ಲಿ, ಭಾಗಮಂಡಲ, ಜೋಡುಪಾಲ, ತೋಳೂರು ಶೆಟ್ಟಳ್ಳಿ, ಹರಗ, ಶಾಂತಳ್ಳಿ, ಕುಂಬೂರು, ಸೂರ್ಲಬ್ಬಿ, ಗರ್ವಾಲೆ ಸೇರಿದಂತೆ ಕುಶಾಲನಗರ ಸುತ್ತಮುತ್ತಲಿನ ಪ್ರದೇಶಗಳು; ಹಾರಂಗಿ ವ್ಯಾಪ್ತಿಯಲ್ಲಿ ಪರಿಶೀಲನೆ ಕೈಗೊಂಡಿರುವದಾಗಿ ವಿವರಿಸಿದರು.
ಕಳೆದ ವರ್ಷ ತಮ್ಮ ತಂಡವು ಮಾಕುಟ್ಟ, ಮಕ್ಕಂದೂರು, ಹಟ್ಟಿಹೊಳೆ, ಜೋಡುಪಾಲ, ಕಾಟಕೇರಿ, ಹೆಬ್ಬೆಟ್ಟಗೇರಿ ಮುಂತಾದೆಡೆ ಕಾರ್ಯಾ ಚರಣೆ ನಡೆಸಿ, ಭೂಕುಸಿತದಿಂದ ಸಂಪರ್ಕ ಕಡಿತಗೊಂಡಿದ್ದ ರಸ್ತೆಗಳಲ್ಲಿ ಮಣ್ಣು ತೆರವು; ಅಲ್ಲಲ್ಲಿ ಮಣ್ಣಿನೊಳಗೆ ಸಿಲುಕಿದ್ದ ಶವಗಳ ಪತ್ತೆಹಚ್ಚಿ ಹೊರತೆಗೆಯಲು ಶ್ರಮಿಸಿದ್ದಾಗಿ ನೆನಪಿಸಿದರು.
ಅಲ್ಲದೆ, ಈ ಬಾರಿ ಮುಂಗಾರು ಕ್ಷೀಣವಿದ್ದರೂ ಮುಂಚಿತವಾಗಿ ಆಗಮಿಸಿರುವ ತಮ್ಮ ನೇತೃತ್ವದ 25 ಮಂದಿಯ ತಂಡ ಸದಾ ಜಾಗೃತರಾಗಿದ್ದು, ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಗೆ ತುರ್ತು ಕರೆ ಬಂದೊಡನೆ ವಿಪತ್ತು ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಲು ಸಿದ್ಧವಿರುವದಾಗಿ ಮಾಹಿತಿ ನೀಡಿದರು.
ಪೊಲೀಸ್ ಮೈತ್ರಿ ಭವನದಲ್ಲಿ ಮೊಕ್ಕಾಂ ಹೂಡಿದ್ದು, ಮೇಲಾಧಿ ಕಾರಿಗಳ ಸಲಹೆ ಪಡೆದು ಪ್ರತಿ ಹಂತದಲ್ಲಿ ಕರ್ತವ್ಯಕ್ಕೆ ಸನ್ನದ್ಧಗೊಂಡಿರು ವದಾಗಿ ಚೌದರಿ ವಿಶ್ವಾಸದ ನುಡಿಯಾಡಿದರು.
ಈ ವೇಳೆ ಉಪ ಅಧಿಕಾರಿ ದೊಡ್ಡಬಸಪ್ಪ ಹಾಗೂ ತಂಡದವರು ಹಾಜರಿದ್ದರು. ಜನತೆಯಲ್ಲಿ ಜಾಗೃತಿಯೊಂದಿಗೆ ಆತ್ಮವಿಶ್ವಾಸ ತುಂಬುವ ದಿಸೆಯಲ್ಲಿ ತಂಡ ಕಾರ್ಯನಿರ್ವಹಿಸುತ್ತಿರುವದಾಗಿ ದೊಡ್ಡಬಸಪ್ಪ ನುಡಿದರು.