ಗೋಣಿಕೊಪ್ಪಲು, ಜೂ.29: ಸರ್ಕಾರ ಬಡ ಜನತೆಯ ಅನುಕೂಲಕ್ಕಾಗಿ ಆಯುಷ್ ಭಾರತ್ ಆರೋಗ್ಯ ಕಾರ್ಡ್ನ್ನು ವಿತರಿಸುತ್ತಿದೆ. ಆದರೆ ಈ ಕಾರ್ಡ್ನ್ನು ವಿತರಿಸುವ ಸೈಬರ್ ಸೆಂಟರ್ಗಳು ಇದನ್ನೇ ಬಂಡವಾಳ ಮಾಡಿಕೊಂಡು ದಂಧೆ ಮಾಡುತ್ತಿದೆ. ನಿಗದಿತ ದರ 10 ರೂಪಾಯಿಗೆ ಬದಲಾಗಿ ಪ್ರತಿ ಕಾರ್ಡ್ಗೆ 100 ರಂತೆ ವಸೂಲು ಮಾಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆಯಲ್ಲಿ ವೀರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಯತಿರಾಜ್ ಗೋಣಿಕೊಪ್ಪಲುವಿನ ಸೈಬರ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆರೋಗ್ಯಾಧಿಕಾರಿಗಳು ಗೋಣಿಕೊಪ್ಪ ಮುಖ್ಯ ರಸ್ತೆಯ ಜಿಆರ್ಸಿ ಬ್ಯಾಂಕಿನ ಮಹಡಿಯ ಮೇಲೆ ಇರುವ ಸೈಬರ್ಗೆ ಭೇಟಿ ನೀಡುವ ಸಂದರ್ಭ ಸರತಿ ಸಾಲಿನಲ್ಲಿ ನೂರಾರು ಸಾರ್ವಜನಿಕರು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ನ್ನು ಪಡೆಯಲು ತಲಾ ಒಬ್ಬರಿಗೆ 100 ರೂ. ಸಂಗ್ರಹ ಮಾಡುವದು ಬೆಳಕಿಗೆ ಬಂದಿದೆ. ಈ ಬಗ್ಗೆ ಸೈಬರ್ ಮಾಲೀಕರನ್ನು ಪ್ರಶ್ನಿಸಿದಾಗ ಎಲ್ಲ ಕಡೆಯಲ್ಲಿಯೂ ರೂ.100 ಪಡೆಯುತ್ತಿದ್ದಾರೆ ಎಂದು ಹಾರಿಕೆ ಉತ್ತರ ನೀಡಿದರು. ಇದರಿಂದ ಅಸಮಧಾನಗೊಂಡ ವೈದ್ಯಾಧಿಕಾರಿ ಗಳು ನಿಯಮದಂತೆ ಕಾರ್ಯ ನಿರ್ವಹಿಸಬೇಕು ಸಾರ್ವಜನಿಕರಿಂದ 10 ಪಟ್ಟು ದರ ವಸೂಲು ಮಾಡಲು ಅವಕಾಶವಿಲ್ಲ ಪಡೆಯುವ ದರವನ್ನು ಪಾರದರ್ಶಕವಾಗಿ ಜನತೆಗೆ ಕಾಣುವ ರೀತಿಯಲ್ಲಿ ದರಫಲಕ ಅಳವಡಿಸಬೇಕು ಎಂದು ಎಚ್ಚರಿಕೆ ನೀಡಿದರು.
ಸರ್ಕಾರದ ನಿಯಮದಂತೆ ಎ4 ಶೀಟ್ಗೆ ಕೇವಲ 10 ರೂ.ಪಡೆದುಕೊಳ್ಳಲು ಅವಕಾಶವಿದೆ. ಜನರಿಗೆ ಅನುಕೂಲವಾಗಲು ಸರ್ಕಾರ ಈ ರೀತಿ ಕಾರ್ಯಕ್ರಮ ರೂಪಿಸಿದೆ. ಆದರೆ 10 ಪಾಲು ಹೆಚ್ಚಿಗೆ ಹಣ ಪಡೆಯುತ್ತಿರುವದು ಸರಿಯಲ್ಲ. ತಕ್ಷಣದಿಂದ ಕೇವಲ 10 ರೂಪಾಯಿ ಪಡೆಯಬೇಕು. ಇದೇ ರೀತಿ ಮುಂದುವರೆದಲ್ಲಿ ಇಲಾಖೆ ಕಾನೂನು ಕ್ರಮ ಕೈಗೊಂಡು ಸೈಬರ್ ಮುಚ್ಚಿಸುವ ಪ್ರಯತ್ನ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು. ಯಾವದೇ ಸೈಬರ್ ಸೆಂಟರ್ನಲ್ಲಿ ಸರ್ಕಾರದ ನಿಯಮ ಮೀರಿ ಹಣ ಹೆಚ್ಚಿಗೆ ನೀಡದಂತೆ ವೈದ್ಯಾಧಿಕಾರಿ ಸಾರ್ವಜನಿಕರಿಗೆ ಸಲಹೆ ನೀಡಿದರು.
-ಹೆಚ್.ಕೆ.ಜಗದೀಶ್