ಮಡಿಕೇರಿ, ಜೂ. 29: ಪೇಟಿಎಂ ಆ್ಯಪ್ ಬಳಸಿ ಬೇರೆಯವರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿದ ದಾವಣಗೆರೆ ಮೂಲದ ಆರೋಪಿ ಭರತ್ ಎಂಬಾತನನ್ನು ಕೊಡಗು ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದ ಕುಶಾಲನಗರದ ಜಿ.ಹೆಚ್. ಅಶ್ರಫ್ ಎಂಬವರ ಎಟಿಎಂ ಅವರ ಬಳಿಯೇ ಇದ್ದರೂ ಕೂಡ ಅವರ ಬ್ಯಾಂಕ್ ಖಾತೆಯಿಂದ ಯಾರೋ ರೂ. 79994 ಹಣವನ್ನು ಡ್ರಾ ಮಾಡಿರುವ ಬಗ್ಗೆ ಕೊಡಗು ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಭರತ್‍ನನ್ನು ಬಂಧಿಸಿದ್ದಾರೆ.

ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದ ಕುಶಾಲನಗರದ ಜಿ.ಹೆಚ್. ಅಶ್ರಫ್ ಅವರ ಕುಶಾಲನಗರ ಶಾಖೆಯ ಕೆನರಾ ಬ್ಯಾಂಕಿನ ಖಾತೆಗೆ ಹಣ ಜಮಾ ಆಗುತ್ತಿದ್ದ ಮೊಬೈಲ್ ಸಂದೇಶಗಳು ಆರೋಪಿ (ಮೊದಲ ಪುಟದಿಂದ) ಬಳಸುತ್ತಿದ್ದ ಮೊಬೈಲ್ ಸಂಖ್ಯೆಗೆ ಬರುತ್ತಿತ್ತು. ಇದನ್ನು ಆರೋಪಿ ಭರತ್ ತನ್ನ ಮೊಬೈಲ್‍ನಲ್ಲಿ ಪೇಟಿಎಂ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಅಶ್ರಫ್ ಅವರು ಈ ಹಿಂದೆ ಉಪಯೋಗಿಸುತ್ತಿದ್ದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ ಅದರಿಂದ ರೂ. 79,994 ಹಣವನ್ನು ಮೋಸದಿಂದ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ.

ಎಸ್ಪಿ ಸುಮನ್ ಡಿ.ಪಿ. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಹರೀಶ್ ಕುಮಾರ್ ಎಂ.ಎ. ಮತ್ತು ಸಿಬ್ಬಂದಿಗಳಾದ ಪಿಎಸ್‍ಐ ಎಂ.ಡಿ. ಅಪ್ಪಾಜಿ, ಕ್ಲೆಮಂಟ್ ಸಲ್ಡಾನ, ಪ್ರಕಾಶ್, ಕಾರ್ಯಪ್ಪ, ಮಧು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು. ಬಂಧಿತ ಆರೋಪಿಯಿಂದ ಲಪಟಾಯಿಸಿದ ಹಣವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.