ಕುಶಾಲನಗರ, ಜೂ. 28: ಕೊಡಗು ಜಿಲ್ಲೆಯಲ್ಲಿ ಕ್ರೀಡೆಗಳು ಕೇವಲ ಜಾತಿ, ಜನಾಂಗಕ್ಕೆ ಸೀಮಿತವಾಗುತ್ತಿರುವದು ವಿಷಾದನೀಯ ಎಂದು ನಂಜರಾಯಪಟ್ಟಣ ನಂಜುಂಡೇಶ್ವರ ಯುವಕ ಸಂಘದ ಅಧ್ಯಕ್ಷರಾದ ಚಟ್ಟಡ್ಕ ಎಲ್ ವಿಶ್ವ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ನಂಜುಂಡೇಶ್ವರ ಯುವಕ ಸಂಘ ಹಾಗೂ ಕೊಡಗು ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ನಂಜರಾಯಪಟ್ಟಣದ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 4ನೇ ವರ್ಷದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪಾಲ್ಗೊಂಡು ಮಾತನಾಡಿದರು.

ಜಿಲ್ಲೆಯಲ್ಲಿ ಬಹುತೇಕ ಯುವಕ ಸಂಘಗಳು ನಶಿಸಿ ಹೋಗುತ್ತಿದ್ದು ಸಂಘಗಳಿಗೆ ಪ್ರೋತ್ಸಾಹದ ಅಗತ್ಯತೆ ಇದೆ ಎಂದರು. ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಗ್ರಾಪಂ ಅಧ್ಯಕ್ಷರಾದ ಜೈನಬಾ ಪಂದ್ಯಾವಳಿಗೆ ಶುಭಾಶಯ ಕೋರಿ ಮಾತನಾಡಿದರು.

ಒಟ್ಟು 14 ತಂಡಗಳು ಜಿಲ್ಲಾ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಉದ್ಯಮಿಗಳಾದ ಎನ್.ಟಿ.ಸಾಗರ್ ಮೈದಾನದ ಉದ್ಘಾಟನೆ ಹಾಗೂ ಪಂದ್ಯಾಟಕ್ಕೆ ಚಾಲನೆ ನೀಡಿದರು. ಪ್ರಥಮ ಬಹುಮಾನವನ್ನು ಕುಶಾಲನಗರದ ಫ್ರೆಂಡ್ಸ್ ಕೊಡಗು, ದ್ವಿತೀಯ ಸತ್ಯ ಫ್ರೆಂಡ್ಸ್, ತೃತೀಯ ರಂಜಿತ್ ಫ್ರೆಂಡ್ಸ್ ಮತ್ತು ನಂಜುಂಡೇಶ್ವರ ಯುವಕ ಸಂಘ 4ನೇ ಸ್ಥಾನ ಪಡೆದುಕೊಂಡಿತು.

ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯರಾದ ವಿಜು ಚಂಗಪ್ಪ, ಗ್ರಾ.ಪಂ. ಸದಸ್ಯರಾದ ಜಿ.ಸಿ.ತಮ್ಮಯ್ಯ, ಚಂದ್ರಾವತಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕೆ.ವಿ.ಪ್ರೇಮಾನಂದ, ಎಸ್‍ಡಿಎಂಸಿ ಅಧ್ಯಕ್ಷರಾದ ಎಂ.ಎಚ್. ಉಮ್ಮರ್, ಕಾಫಿ ಬೆಳೆಗಾರರಾದ ಕೆದಂಬಾಡಿ ಸೋಮಣ್ಣ, ಕೆ.ಸಿ.ತಿಮ್ಮಯ್ಯ, ರ್ಯಾಫ್ಟಿಂಗ್ ಹಾಗೂ ಬೋಟ್ ಮಾಲೀಕರಾದ ಬಿ.ಸಿ.ಮಾದಯ್ಯ, ಉದ್ಯಮಿ ರತೀಶ್, ಯುವಕ ಸಂಘದ ಖಜಾಂಚಿ ಮ್ಯಾಥ್ಯು, ಎಂ.ಎಂ.ಹ್ಯಾರಿಸ್, ಸುನಿಲ್, ಮಜೀದ್ ಮತ್ತಿತರರು ಪಾಲ್ಗೊಂಡಿದ್ದರು.