ಗೋಣಿಕೊಪ್ಪಲು, ಜೂ. 27: ದಕ್ಷಿಣ ಕೊಡಗಿನ ಕುಗ್ರಾಮಗಳಿಗೆ ಜಿಲ್ಲಾಧಿಕಾರಿಗಳಾದ ಅನೀಶ್ ಕಣ್ಮಣಿ ಜಾಯ್ ಭೇಟಿ ನೀಡಿದ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ನೇತೃತ್ವದಲ್ಲಿ ರೈತ ಮುಖಂಡರುಗಳು ವೀರಾಜಪೇಟೆ ತಹಶೀಲ್ದಾರ್ ಬಗ್ಗೆ ದೂರು ಸಲ್ಲಿಸಿದರು. ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ಗೋವಿಂದರಾಜು ಅವರು ರೈತರು ಸೇರಿದಂತೆ ಎಲ್ಲ ವರ್ಗದ ಜನತೆಗೆ ಕಛೇರಿಯಲ್ಲಿ ಅನವಶ್ಯಕ ಕಿರುಕುಳ ನೀಡುವ ಮೂಲಕ ಕಡತ ವಿಲೇವಾರಿಗೆ ವಿಳಂಬಧೋರಣೆ ಅನುಸರಿಸುತ್ತಿರುವದು, ಕಚೇರಿಗೆ ತೆರಳುವ ನಾಗರಿಕರನ್ನು ಸೌಜನ್ಯದಿಂದ ಮಾತನಾಡಿಸುತ್ತಿಲ್ಲ. ಎಲ್ಲ ವಿಚಾರಗಳಿಗೂ ಸ್ಥಳ ಪರಿಶೀಲನೆ ನಡೆಸಬೇಕು ಎಂಬ ನೆಪದೊಂದಿಗೆ ಒಂದೊಂದು ಕಡತಕ್ಕೂ ಪರೋಕ್ಷವಾಗಿ ಸತಾಯಿಸು ತ್ತಿದ್ದಾರೆ ಎಂದು ದೂರಿದರು. ದಕ್ಷಿಣ ಕೊಡಗಿನ ಕಾಡಾನೆ, ಹುಲಿ ಹಾವಳಿ ಬಗ್ಗೆ ಶಾಶ್ವತ ಪರಿಹಾರ, ನಿರಂತರ ವಿದ್ಯುತ್‍ಚ್ಛಕ್ತಿ ನಿಲುಗಡೆ ತಡೆ, ತಾಲೂಕು ಕೇಂದ್ರದಲ್ಲಿ ರೈತರು ಬೆಳೆದ ಬೆಳೆಗಳನ್ನು ಖರೀದಿಸಲು ಕೇಂದ್ರ ಸ್ಥಾಪನೆ, ಗಡಿಭಾಗ ಅಂತರ್‍ರಾಜ್ಯ ಸಂಪರ್ಕ ಕಲ್ಪಿಸುವ ರಸ್ತೆ ಸರಿಪಡಿಸುವಿಕೆ, ಬ್ಯಾಂಕ್‍ಗಳಿಂದ ರೈತರಿಗೆ ಸಾಲ ಮರುಪಾವತಿಗೆ ಆಗಿಂದಾಗ್ಗೆ ನೋಟೀಸು ಜಾರಿ ನಿಲ್ಲಿಸಬೇಕು. ಕಂದಾಯ ಇಲಾಖೆಯಲ್ಲಿ ಆಗುತ್ತಿರುವ ವಿಳಂಬ ನೀತಿ, ಕಡತಗಳಿಗೆ ಲಂಚ ಸ್ವೀಕಾರಕ್ಕೆ ಕಡಿವಾಣ, ಜಮ್ಮಾಕೋವಿ ವಿನಾಯಿತಿ ಪತ್ರ ಹಾಗೂ ವರ್ಗಾವಣೆ ಸಂಬಂದ ಕಡತ ವಿಲೇವಾರಿಯಲ್ಲಿ ವಿಳಂಬ, ಮನೆ ನಿರ್ಮಿಸಿಕೊಳ್ಳಲು ಕೃಷಿ ಭೂಮಿಯನ್ನು ಕೃಷಿಯೇತರ ಪರಿವರ್ತನೆಗೆ ತಕ್ಷಣ ಕಡತ ವಿಲೇವಾರಿ ಮಾಡುವದು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಲಿಖಿತವಾಗಿ ಮನವಿ ಸಲ್ಲಿಸುವ ಮೂಲಕ ಬಗೆ ಹರಿಸುವಂತೆ ಮನವಿ ಮಾಡಿದರು.

ಭೇಟಿಯ ಸಂದರ್ಭ ನಾಗರಿಕ ಹೋರಾಟ ಸಮಿತಿಯ ಹಿರಿಯರಾದ ಅಜ್ಜಮಾಡ ಕಟ್ಟಿ ಮಂದಯ್ಯ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್, ಟಿ. ಶೆಟ್ಟಿಗೇರಿಯ ಚಟ್ಟಂಗಡ ಕಂಬಣ್ಣ ಕಾರ್ಯಪ್ಪ, ರೈತ ಮುಖಂಡರಾದ ಬೊಟ್ಟಂಗಡ ತಿಲಕ್, ದೇಕಮಾಡ ನವೀನ್, ಕೋದೇಂಗಡ ಸುರೇಶ್, ಗಾಡಂಗಡ ಉತ್ತಯ್ಯ, ಎಂ.ಬಿ. ಅಶೋಕ್, ತಹಶೀಲ್ದಾರ್ ಗೋವಿಂದರಾಜ್ ಶ್ರೀಮಂಗಲ ಅರಣ್ಯ ಇಲಾಖೆಯ ಅಧಿಕಾರಿಗಳಾದ ಎಸಿಎಫ್ ದಯಾನಂದ್, ಆರ್.ಎಫ್.ಓ. ವೀರೆಂದ್ರ, ರೆವೆನ್ಯೂ ಇಲಾಖೆಯ ದೇವಯ್ಯ, ಕಿಸಾನ್, ಪಿಡಿಓ ಸತೀಶ್, ಮುಂತಾದವರು ಹಾಜರಿದ್ದರು. - ಹೆಚ್.ಕೆ. ಜಗದೀಶ್