ಸಿದ್ದಾಪುರ, ಜೂ. 27: ಕಾಡಾನೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಕಾರ್ಮಿಕ ಮಹಿಳೆಗೆ ಗಂಭೀರ ಗಾಯವಾಗಿರುವ ಘಟನೆ ಬೀಟಿಕಾಡು ಕಾಫಿ ತೋಟದಲ್ಲಿ ನಡೆದಿದೆ.
ಅಲ್ಲಿನ ನಿವಾಸಿ ಕಮಲ (55) ಎಂಬವರು ಬಂಗಲೆ ಕೆಲಸಕ್ಕೆ ತೆರಳಿ ಸಂಜೆ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಮನೆಯ ಸಮೀಪದಲ್ಲಿ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ಈ ಸಂದರ್ಭ ಕಮಲ ಕಾಫಿ ತೋಟದಲ್ಲಿ ಓಡಿದ್ದು, ಕಾಡಾನೆಯು ಓಡಿಸಿ, ದಾಳಿ ನಡೆಸಿದೆ. ಈ ಸಂದರ್ಭ ಮಹಿಳೆಯು ಕಿರುಚಿಕೊಂಡ ಶಬ್ದ ಕೇಳಿ ಸಮೀಪದ ಕಾರ್ಮಿಕರು ಓಡಿ ಬಂದಿದ್ದು, ಜನರನ್ನು ಕಂಡ ಕಾಡಾನೆಯು ಕಾಫಿ ತೋಟದ ಒಳಕ್ಕೆ ತೆರಳಿದೆ. ದಾಳಿಯಿಂದಾಗಿ ಕಮಲ ಅವರ ಕಾಲು ಹಾಗೂ ಸೊಂಟಕ್ಕೆ ಪೆಟ್ಟಾಗಿದ್ದು, ಅಮ್ಮತ್ತಿಯ ಆರ್.ಐ.ಹೆಚ್.ಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತೀವ್ರವಾಗಿದ್ದು, ಗುಹ್ಯ, ಇಂಜಲಗರೆ, ಕರಡಿಗೋಡು ವ್ಯಾಪ್ತಿಯಲ್ಲಿ 25 ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ಕಾಡಾನೆ ಹಾವಳಿಯಿಂದಾಗಿ ಕಾರ್ಮಿಕರು ಹಾಗೂ ಬೆಳೆಗಾರರಿಗೆ ತೀವ್ರ ತೊಂದರೆಯಾಗಿದ್ದು, ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ವಾಸು