ಶ್ರೀಮಂಗಲ, ಜೂ. 27: ಶ್ರೀಮಂಗಲ ವ್ಯಾಪ್ತಿಯ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡುಗಳನ್ನು ಮರಳಿ ಅರಣ್ಯಕ್ಕಟ್ಟುವ ಮೂರು ದಿನಗಳ ಕಾರ್ಯಾಚರಣೆ ಯನ್ನು ಗುರುವಾರದಿಂದ ಆರಂಭಿಸಲಾಗಿದ್ದು, ಶ್ರೀಮಂಗಲ ವನ್ಯಜೀವಿ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣನವರ್ ಅವರ ನೇತೃತ್ವದಲ್ಲಿ ಸುಮಾರು 25 ಸಿಬ್ಬಂದಿಗಳ ತಂಡ ಪಾಲ್ಗೊಂಡಿದೆ. ಆದರೆ ದಕ್ಷಿಣ ಕೊಡಗಿನ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಗುರುವಾರ ನಿರಂತರ ಮಳೆಯಾಗುತ್ತಿದ್ದು, ಕಾರ್ಯಾಚರಣೆಗೆ ಹಿನ್ನಡೆಯಾಗಿದೆ.

ಕಾರ್ಯಾಚರಣೆಯು ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುರ್ಚಿ ಗ್ರಾಮದ ಇರ್ಪುವಿನ ಕುಂಬಾರ ಮೊಟ್ಟೆಯಿಂದ ಆರಂಭವಾಗಿದ್ದು, ಕಾರ್ಯಾಚರಣೆ ಸಂದರ್ಭ 4 ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಅವುಗಳನ್ನು ಸಮೀಪದ ಬ್ರಹ್ಮಗಿರಿ ಅಭಯಾರಣ್ಯಕ್ಕೆ ಸೇರಿಸಲು ತಂಡ ಮುಂದಾಗಿದೆ. ಕಾರ್ಯಾಚರಣೆ ಸಂದರ್ಭ ಕೋವಿ, ಸಿಡಿ ಮದ್ದುಗಳು, ಬ್ಯಾಂಡ್‍ಗಳನ್ನು ಇತ್ಯಾದಿ ಬಳಸಲಾಗುತ್ತಿದೆ. ಆತ್ಮರಕ್ಷಣೆಗೆ ಅಗತ್ಯವಾದ ಗುಂಡು ಸಹಿತ ಕೋವಿಯನ್ನು ಸಹ ಸಿಬ್ಬಂದಿಗಳಿಗೆ ಅರಣ್ಯ ಇಲಾಖೆ ನೀಡಿದೆ.

ಇರ್ಪು ಸಮೀಪ ಖಾಸಗಿ ತೋಟ ಸುಮಾರು 60 ಎಕರೆಯಷ್ಟು ಪಾಳುಬಿದ್ದಿದ್ದು, ಇದರಲ್ಲಿ ಕಾಡಾನೆಗಳು ಹಗಲು ಹೊತ್ತು ಆಶ್ರಯ ಪಡೆಯುತ್ತಿದ್ದು, ರಾತ್ರಿ ಸಮಯದಲ್ಲಿ ಇಲ್ಲಿಂದ ಗ್ರಾಮಗಳಿಗೆ ನುಸುಳುತ್ತಿದೆ ಎಂಬದನ್ನು ಕಾರ್ಯಾಚರಣೆ ಸಂದರ್ಭ ಪತ್ತೆ ಹಚ್ಚಲಾಗಿದೆ ಎಂದು ಅರಣ್ಯ ಅಧಿಕಾರಿ ವೀರೇಂದ್ರ ಮರಿಬಸಣ್ಣವರ್ ತಿಳಿಸಿದ್ದಾರೆ. ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ತಾ. 27ರಿಂದ ಆರಂಭವಾಗಿದ್ದು, 29 ರವರೆಗೆ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.