ಮಡಿಕೇರಿ, ಜೂ. 27: ನಗರದ ಪೊಲೀಸ್ ವಸತಿಗೃಹದಲ್ಲಿ ಕಳ್ಳತನಕ್ಕೆ ಯತ್ನಿಸಿ ಸೆರೆಸಿಕ್ಕಿದ್ದ ಆರೋಪಿ ಗಳಿಬ್ಬರನ್ನು ನಗರ ಠಾಣಾ ಪೊಲೀಸರು ವಿಚಾರಣೆಗೆ ಒಳಪಡಿಸುವದರೊಂದಿಗೆ; ಏಳು ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ. ಕೃತ್ಯದ ಆರೋಪಿ ಪ್ರಕಾಶ್ ಎಂಬಾತ ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದವನಾಗಿದ್ದು, ಬಾಡಿಗೆ ಮನೆಯೊಂದನ್ನು ಪಡೆದು ಗುಜರಿ ವ್ಯಾಪಾರಿ ಹನೀಫ್ ಬಳಿ ಕೆಲಸ ನಿರ್ವಹಿಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಇನ್ನೋರ್ವ ಮಲ್ಲಿಕಾರ್ಜುನ ನಗರದ ಸಂತೋಷ್ ಕೂಡ ಅಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ.
ಬೇರೆ ಬೇರೆ ಕಡೆಗಳಲ್ಲಿ ಆಟೋದೊಂದಿಗೆ ತೆರಳಿ ಗುಜರಿ ವಸ್ತುಗಳನ್ನು ಖರೀದಿಸುತ್ತಿದ್ದು, ಅನಂತರದಲ್ಲಿ ಕಳ್ಳತನ ನಿರತರಾಗಿದ್ದರೆನ್ನಲಾಗಿದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ನಿರ್ದೇಶನದೊಂದಿಗೆ ಡಿವೈಎಸ್‍ಪಿ ಕೆ.ಎಸ್. ಸುಂದರರಾಜ್ ಹಾಗೂ ವೃತ್ತ ನಿರೀಕ್ಷಕ ಅನೂಪ್‍ಮಾದಪ್ಪ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಷಣ್ಮುಖ ಮತ್ತು ಸಿಬ್ಬಂದಿಗಳಾದ ಅರುಣ್‍ಕುಮಾರ್, ದಿನೇಶ್, ನಾಗರಾಜ್, ಕಗ್ಗಣ್ಣನವರ್, ಪ್ರವೀಣ್ ಕಾರ್ಯಾಚರಣೆ ನಡೆಸಿ ಆಟೋರಿಕ್ಷಾ ಹಾಗೂ ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.
ವಿವಿಧೆಡೆ ಕೃತ್ಯವೆಸಗಿದ್ದ ಇತರ ಕಳವು ಮಾಲನ್ನು ವಶಕ್ಕೆ ಪಡೆಯುವದರೊಂದಿಗೆ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.