ಮಡಿಕೇರಿ, ಜೂ. 28: ಕಳೆದ ಬಾರಿಯ ಮಹಾಮಳೆಗೆ ಬೆಟ್ಟ, ಗುಡ್ಡಗಳು ಕುಸಿದು ಮಂಗಳೂರು-ಮಡಿಕೇರಿ, ಮೈಸೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ಮಳೆಗಾಲದಲ್ಲಿ ಪೂರ್ತಿ ಬಂದ್ ಆಗಿ ಎಲ್ಲ ವಾಹನ ಸುಳ್ಯ-ಆಲೆಟ್ಟಿ ಮಾರ್ಗವಾಗಿ ಪಾಣತ್ತೂರು-ಕರಿಕೆ, ಬಾಗಮಂಡಲಕ್ಕಾಗಿ ಮಡಿಕೇರಿ ಸೇರುತ್ತಿತ್ತು, ಹಾಗೆಯೇ ಈ ಬಾರಿ ಮಳೆಗಾಲದಲ್ಲಿ ಇದೇ ರಸ್ತೆ ಬಳಸಬೇಕಾದ ಅನಿವಾರ್ಯತೆ ಪ್ರಯಾಣಿಕರಿಗೆ ಬರುವ ಸಾದ್ಯತೆ ಇದೆ. ರಾಜ್ಯ ಹೆದ್ದಾರಿಯಲ್ಲಿ ಸಂಪಾಜೆಯಿಂದ ಮಡಿಕೇರಿಗೆ ಘನ ವಾಹನ ನಿಷೇದಿಸಲಾಗಿದೆ, ಅಲ್ಲದೆ ಕೊಡಗು ಈ ಬಾರಿಯೂ ಅಷ್ಟು ಸುರಕ್ಷಿತ ಅಲ್ಲ ಬೆಟ್ಟಗಳ ಬಿರುಕುಗಳು ಹಾಗೆ ಇದೆ ಮತ್ತು ಹವಾಮಾನ ಇಲಾಖೆಯು ಬಾರಿ ಮಳೆಗೆ ಅಲ್ಲಿಯ ವಾಸಿಗರನ್ನು ಸ್ಥಳಾಂತರ ಮಾಡಬೇಕಾಗಬಹುದು ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪಾಣತ್ತೂರು-ಕರಿಕೆ ಮೂಲಕ ಮಡಿಕೇರಿ ಸಂಪರ್ಕಿಸವದು ಅನಿವಾರ್ಯ. ಆದರೆ ಈ ರಸ್ತೆ ಯಾವದೇ ದುರಸ್ತಿ ಕಾರ್ಯ ಇಲ್ಲದೆ ಸಂಚಾರ ಸುರಕ್ಷತೆಗೆ ಅಡ್ಡಿಯಾಗಿದೆ ಮಳೆ ನೀರು ಹರಿದು ಹೋಗಲು ಚರಂಡಿ ಇಲ್ಲದೆ ಕೆಲವೊಂದು ಕಡೆ ರಸ್ತೆ ಕುಸಿಯುವ ಭೀತಿಯನ್ನು ಇಲ್ಲಿನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಘಟಕದ ಕೊಡಗು ಜಿಲ್ಲಾ ಅಧ್ಯಕ್ಷ ಉನೈಸ್ ಪೆರಾಜೆ ಹಾಗೂ ಕಾರ್ಯಕರ್ತರು. ಮಾಧ್ಯಮದವರನ್ನು ಸ್ಥಳಕ್ಕೆ ಕರೆದೊಯ್ದು ಮಾಹಿತಿ ನೀಡಿದರಲ್ಲದೆ, ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಮತ್ತು ಸಂಬಂಧಪಟ್ಟ ಇಲಾಖೆಯವರನ್ನು ರಸ್ತೆ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದ್ದಾರೆ.