ಕೂಡಿಗೆ, ಜೂ. 27: ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಕೂಡು ಮಂಗಳೂರು ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ, ಆಯಾ ವ್ಯಾಪ್ತಿಯ ಶಾಲೆಗಳು, ಅಂಗನವಾಡಿಗಳು, ವಿದ್ಯಾರ್ಥಿ ನಿಲಯಗಳಲ್ಲಿನ ಮೇಲ್ವೀಚಾರಕರಿಂದ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದು, ಅವರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸುವದಾಗಿ ಭರವಸೆ ನೀಡಿದರು. ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ಆನೆಕೆರೆ, ಚೋಳನಕೆರೆ ಸೇರಿದಂತೆ 7 ಕೆರೆಗಳು ಒತ್ತುವರಿ ಯಾಗಿದ್ದು, ಇವುಗಳನ್ನು ತೆರವುಗೊಳಿಸ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಅಲ್ಲದೆ, ಗ್ರಾ.ಪಂ ವ್ಯಾಪ್ತಿಯಲ್ಲಿ ಕೃಷಿ ಇಲಾಖೆಯ ಸಮೀಪ ಕಳೆದ 10 ವರ್ಷಗಳ ಹಿಂದೆ ಕಾದಿರಿಸಿದ್ದ ನಿವೇಶನವನ್ನು ನಿವೇಶನ ರಹಿತರಿಗೆ ನೀಡಲು ಇದುವರೆಗೂ ಯಾವದೇ ರೀತಿಯಲ್ಲಿಯೂ ಪ್ರಗತಿ ಕಂಡಿಲ್ಲ. ನಿವೇಶನ ರಹಿತರ ಪಟ್ಟಿ ತಯಾರಿಸಿದ್ದು, ಇದುವರೆಗೂ ನೀಡಲು ಮೇಲಾಧಿಕಾರಿಗಳಿಂದ ಆದೇಶ ದೊರತಿಲ್ಲ ಎಂದು ಗ್ರಾ.ಪಂ ಸದಸ್ಯೆ ಸಾವಿತ್ರಿ ರಾಜು ಅವರು ಎಂಎಲ್‍ಸಿ ಅವರ ಗಮನಕ್ಕೆ ತಂದರು.

ಕೂಡುಮಂಗಳೂರು ಕೈಗಾರಿಕಾ ಬಡಾವಣೆಯೊಂದರಲ್ಲಿ ಕೆರೆ ಯೊಂದನ್ನು ಮುಚ್ಚಲಾಗಿದ್ದು, ಅದರ ಸಮೀಪವೇ ಸ್ಮಶಾನಕ್ಕಾಗಿ ಕಾದಿರಿಸಿದ ಜಾಗವು ಒತ್ತುವರಿಯಾಗಿದ್ದು, ಒತ್ತುವರಿ ಜಾಗವನ್ನು ತೆರವುಗೊಳಿಸಿ ಕೊಡಬೇಕೆಂದು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಿದ್ದರೂ ಇದುವರೆಗೂ ಯಾವದೇ ಕ್ರಮಕೈಗೊಂಡಿಲ್ಲ ಎಂದು ಗ್ರಾ.ಪಂ ಸದಸ್ಯೆ ಜ್ಯೋತಿ ಪ್ರಮೀಳಾ ಆರೋಪಿಸಿದರು.

ಸಭೆಯಲ್ಲಿ ಪ್ರಮುಖವಾಗಿ ಕೆರೆಗಳು ಒತ್ತುವರಿಯಾಗಿರುವದನ್ನು ತೆರವುಗೊಳಿಸುವದು, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸುವದು, ಗ್ರಾ.ಪಂ. ಕಟ್ಟಡವು ಈಗಾಗಲೇ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವದರಿಂದ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭ ಬದಲಿ ಕಟ್ಟಡ ನಿರ್ಮಾಣ ಮಾಡಲು ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿ ಜಾಗಕ್ಕೆ ಅನುವು ಮಾಡಿಕೊಡಬೇಕೆಂದು ಸುನೀಲ್ ಸುಬ್ರಮಣಿ ಅವರಲ್ಲಿ ಮನವಿ ಮಾಡಲಾಯಿತು. ನಂತರ ಮುಳ್ಳುಸೋಗೆ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿದ ಸುನೀಲ್ ಸುಬ್ರಮಣಿ ಅವರು ಅಲ್ಲಿನ ಸಮಸ್ಯೆಗಳ ಮತ್ತು ಅಹವಾಲುಗಳನ್ನು ಸ್ವೀಕರಿಸಿದರು. ಒತ್ತುವರಿಯಾಗಿರುವ ಪಾರ್ಕ್ ಜಾಗವನ್ನು ತೆರವುಗೊಳಿಸಿಕೊಡಬೇಕು, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂದಿಬಸವನಹಳ್ಳಿಯಲ್ಲಿ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸಲು ಕ್ರಮಕೈಗೊಂಡಿದ್ದು, ಜಾಗದ ವಿಚಾರದಲ್ಲಿ ಗೊಂದಲವಿರುವದರಿಂದ ಸಮಸ್ಯೆಯನ್ನು ಪರಿಹರಿಸಿಕೊಡಬೇಕು ಎಂದು ಗ್ರಾ.ಪಂ ಸದಸ್ಯರು ಕೋರಿದರು. ಗ್ರಾಮ ಪಂಚಾಯ್ತಿಗೆ ಪ್ರಮುಖ ಜಲಮೂಲವಾಗಿರುವ ರೊಂಡೆಕೆರೆಯನ್ನು ಉಳಿಸಲು ಹೂಳೆತ್ತಿ, ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು. ನಂತರ ಗ್ರಾ.ಪಂ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದವು.

ಈ ಸಂದರ್ಭ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಪುಷ್ಪರಾಜೇಶ್, ತಾಲೂಕು ಪಂಚಾಯ್ತಿ ಸ್ಥಾನೀಯ ಸಮಿತಿಯ ಅಧ್ಯಕ್ಷೆ ತಂಗಮ್ಮ, ತಾಲೂಕು ಪಂಚಾಯ್ತಿ ಸದಸ್ಯೆ ಗಣೇಶ್, ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿ, ಮುಳ್ಳುಸೋಗೆ ಪಂಚಾಯ್ತಿ ಅಧ್ಯಕ್ಷೆ ಭವ್ಯ, ಎರಡೂ ಗ್ರಾ.ಪಂ.ನ ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಸುನೀಲ್‍ಕುಮಾರ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ರಾಜಶೇಖರ್, ಆಯೆಷಾ, ಸೇರಿದಂತೆ ನಾಲ್ಕು ಇಲಾಖೆಯ ಅಧಿಕಾರಿಗಳು ಇದ್ದರು.