ಕುಶಾಲನಗರ, ಜೂ 27: ಕುಶಾಲನಗರ ರೋಟರಿ ಸಂಸ್ಥೆಯ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಕುಶಾಲನಗರದಲ್ಲಿ ನಡೆಯಿತು.

ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡ ರೋಟರಿ 3180 ಜಿಲ್ಲಾ ಪ್ರಮುಖರಾದ ಎಎಸ್‍ಎನ್ ಹೆಬ್ಬಾರ್ ಅವರು ನೂತನ ಸಾಲಿನ ಅಧ್ಯಕ್ಷ ಎಂ.ಡಿ.ಅಶೋಕ್, ಕಾರ್ಯದರ್ಶಿ ಸಂಜು ಬೆಳ್ಳಿಯಪ್ಪ ಮತ್ತು ತಂಡಕ್ಕೆ ಪ್ರಮಾಣ ವಚನ ಬೋಧಿಸಿದರು.

ನಂತರ ಮಾತನಾಡಿದ ಎಎಸ್‍ಎನ್ ಹೆಬ್ಬಾರ್ ರೋಟರಿ ಸಂಸ್ಥೆ ಸ್ನೇಹ ಮತ್ತು ಸೇವೆಯ ಸಂಕೇತವಾಗಿದೆ. ನಿರಂತರ ಮತ್ತು ನಿಸ್ವಾರ್ಥ ಪರಿಶ್ರಮದ ಮೂಲಕ ರೋಟರಿ ವಿಶ್ವದ ಪ್ರಮುಖ ಸೇವಾ ಸಂಸ್ಥೆಯಾಗಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಕಳೆದ 1 ಶತಮಾನಕ್ಕಿಂತಲೂ ಅಧಿಕ ವರ್ಷಗಳ ಕಾಲ ರೋಟರಿ ಸಮಾಜದ ಉನ್ನತಿಯಲ್ಲಿ ಪಾಲ್ಗೊಂಡಿದೆ.

ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಇತರರ ಬಾಳಲ್ಲಿ ಆಶಾಕಿರಣ ಮೂಡಿಸುವಲ್ಲಿ ರೋಟರಿ ಸಂಪೂರ್ಣ ಯಶಸ್ವಿಯಾಗಿದೆ ಎಂದರು. ನಿರ್ಗಮಿತ ಸಹಾಯಕ ರಾಜ್ಯ ಪಾಲ ಧರ್ಮಪುರಿ ನಾರಾಯಣ್, ವಲಯದ ಕಾರ್ಯ ಯೋಜನೆಗಳ ಬಗ್ಗೆ ವಿವರಿಸಿದರು.

ಅಧ್ಯಕ್ಷ ಕೆ.ಎಂ. ಜೇಕಬ್ 2018-19ನೇ ಸಾಲಿನಲ್ಲಿ ಕೈಗೊಂಡ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯದರ್ಶಿ ಪ್ರೇಮಚಂದ್ರನ್ 2018-19ನೇ ಸಾಲಿನ ವರದಿ ವಾಚಿಸಿದರು.

ರೋಟರಿಯ ನೂತನ ಸಾಲಿನ ಸಹಾಯಕ ರಾಜ್ಯಪಾಲ ಪಿ.ನಾಗೇಶ್ ಮಾತನಾಡಿದರು. ವಲಯ ಕಾರ್ಯದರ್ಶಿ ಎಚ್.ಟಿ. ಅನಿಲ್, ಕ್ರಿಜ್ವಲ್ ಕೋಟ್ಸ್ ಮಾತನಾಡಿ, ಕುಶಾಲನಗರ ರೋಟರಿಯ ಯೋಜನೆಗಳ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸುವದರೊಂದಿಗೆ ಶುಭ ಹಾರೈಸಿದರು.

ಈ ಸಂದರ್ಭ ನೂತನ ಸದಸ್ಯರು ಗಳನ್ನು ಸೇರ್ಪಡೆಗೊಳಿಸಲಾಯಿತು. ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ರೋಟರಿ ಹಿರಿಯ ಸದಸ್ಯರಾದ ಎ.ಎ. ಚಂಗಪ್ಪ, ಡಾ.ಹರಿ ಎ ಶೆಟ್ಟಿ, ಮಹೇಶ್ ನಾಲ್ವಡೆ, ಪಿ.ಆರ್. ನವೀನ್, ಎನ್.ಜಿ. ಪ್ರಕಾಶ್ ಸೇರಿದಂತೆ ಕುಶಾಲನಗರ ಮತ್ತು ವಲಯದ ವಿವಿಧ ರೋಟರಿ ಪ್ರಮುಖರು ಪಾಲ್ಗೊಂಡಿದ್ದರು.