ಮಡಿಕೇರಿ, ಜೂ. 28: ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಬಯಲುಗೊಂಡ ಅಶ್ಲೀಲ ವೀಡಿಯೋ ಪ್ರಕರಣ ಹನಿಟ್ರಾಪ್‍ಗೆ ಸಂಬಂಧಿಸಿದ್ದಾಗಿದೆ ಎಂದು ಬಂಟ್ವಾಳದಲ್ಲಿ ಪುಕಾರಾಗಿದೆ. ಬಂಟ್ವಾಳ ನಿವಾಸಿಯೊಬ್ಬರನ್ನು ಹನಿ ಟ್ರಾಪ್ ಮಾಡಿ ಅಶ್ಲೀಲ ವಿಡಿಯೋ ಮಾಡಿ ಹಣಕ್ಕಾಗಿ ಬೆದರಿಕೆ ಒಡ್ಡಿದ ಘಟನೆ ಇದಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳದ ಲೊರೆಟ್ಟು ಟಿಪ್ಪು ನಗರ ನಿವಾಸಿ 55 ವರ್ಷದ ಮೋನು ಯಾನೆ ಅಬ್ದುಲ್ ರಹಿಮಾನ್ ಅವರು ಹನಿಟ್ರಾಪ್‍ಗೆ ಒಳಗಾದ ಸಂತ್ರಸ್ತರಾಗಿದ್ದು, ಇವರಿಗೆ 8 ತಿಂಗಳ ಹಿಂದೆ ವಾಯ್ಸ್ ಮೆಸೇಜ್ ಮೂಲಕ ಓರ್ವ ಹುಡುಗಿಯ ಪರಿಚಯವಾಗಿದ್ದಳು. ಪರಿಚಯವಾದ ಕೆಲವು ದಿನಗಳ ನಂತರ ಇಬ್ಬರೂ ಮಂಗಳೂರಿನ ಲಾಡ್ಜ್ ಒಂದರಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ಅಶ್ಲೀಲ ವೀಡಿಯೋವನ್ನು ಹುಡುಗಿಯು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ಈ ಘಟನೆ ನಡೆದ ಕೆಲವು ದಿನಗಳ ನಂತರ ರಹಿಮಾನ್‍ಗೆ ಅಪರಿಚಿತ ವ್ಯಕ್ತಿಯೋರ್ವ ಈ ಅಶ್ಲೀಲ ವೀಡಿಯೋವನ್ನು ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ರಹಿಮಾನ್ ಹುಡುಗಿಯಲ್ಲಿ ವಿಚಾರಿಸಿದ ಸಂದರ್ಭ, ಆಕೆ ತನ್ನ ಮೊಬೈಲ್ ರಿಪೇರಿಗೆ ಕೊಟ್ಟ ಸಮಯ ಬೇರೆಯವರಿಗೆ ದೊರಕಿದೆ ಎಂದು ತಿಳಿಸಿದ್ದಾಳೆ.

ಆದರೆ ಆ ವೀಡಿಯೋವನ್ನು ಪಡೆದ ವ್ಯಕ್ತಿ ವೀಡಿಯೋವನ್ನು ಬಳಸಿ ರಹಿಮಾನ್‍ಗೆ ನಿರಂತರವಾಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ ರಹಿಮಾನ್ ಹಣ ಕೊಡಲು ಒಪ್ಪದಿದ್ದಾಗ ಬಂಟ್ವಾಳದಲ್ಲಿ 4 ಜನ ಅಪರಿಚಿತರು ರಹಿಮಾನ್‍ನ್ನು ಅಪಹರಿಸಿ ಅವರ ಬಳಿಯಿದ್ದ 60,000 ರೂಪಾಯಿಗಳನ್ನು ಮತ್ತು ಪರ್ಸನ್ನು ಬಲವಂತವಾಗಿ ಕಿತ್ತುಕೊಂಡು ಎಟಿಎಂ ಕಾರ್ಡ್‍ನ್ನು ಬಳಸಿ 9,000 ರೂ. ಗಳನ್ನು ಪಡೆದಿದ್ದಾರೆ. ಅಲ್ಲದೆ ರಹಿಮಾನ್‍ನನ್ನು ಬೆದರಿಸಿ ಅದೇ ದಿನ 48,000 ರೂ. ಗಳನ್ನು ಆರೋಪಿಗಳು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೆ ಆ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರ ಮಾಡಿ ಹಣಕ್ಕಾಗಿ ನಿರಂತರ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ 27.06.2019 ರಂದು ಕಲಂ 363, 323, 504, 392, 383, 506 ಜೊತೆಗೆ 34 ಐ.ಪಿ.ಸಿ. ಮತ್ತು 66ಇ ಮತ್ತು 67ಎ ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಮಿರರ್ ಜಾಲತಾಣ ವರದಿ ಮಾಡಿದೆ.

-ಟಿ.ಜಿ. ಸತೀಶ್