ವೀರಾಜಪೇಟೆ, ಜೂ. 26: ವಾಹನ ಸವಾರರು ಕೇವಲ ನಿಯಮಕ್ಕಾಗಿ ಮಾತ್ರ ಹೆಲ್ಮೆಟ್, ಸುರಕ್ಷತೆಗಾಗಿ ಅಲ್ಲ ಎಂದು ಭಾವಿಸಿ ಅರೆಬರೆ ಹೆಲ್ಮೇಟ್ ಧರಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ, ಇನ್ನೂ ಕೆಲವರು ಹೆಲ್ಮೆಟ್ ಧರಿಸದೆ ಓಡಾಡುತ್ತಾರೆ. ಬೈಕ್ ಸವಾರರು ಐಎಸ್‍ಐ ಹಾಗೂ ಬಿಎಸ್‍ಐ ಗುಣಮಟ್ಟದ ಪೂರ್ಣಪ್ರಮಾಣದ ಹೆಲ್ಮೆಟ್ಟನ್ನೇ ಹಾಕಿಕೊಳ್ಳಬೇಕೆಂಬದು ನಿಯಮ. ಆದರೆ, ನಗರದಲ್ಲಿ ಕಾನೂನು ಪಾಲಿಸುವಲ್ಲಿ ಎಲ್ಲರೂ ಎಡವಿದ್ದಾರೆ. ನಿಯಮ ಗಾಳಿಗೆ ತೂರಿ ಈ ರೀತಿ ವಾಹನ ಸವಾರಿ ಮಾಡುತ್ತಿರುವದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಸಾಮಾನ್ಯವಾಗಿ ಅಪಘಾತಗಳು ಸಂಭವಿಸಿದ ಸಂದರ್ಭ ತಲೆಗೆ ಪೆಟ್ಟು ಬಿದ್ದು ಸವಾರರು ಮೃತಪಟ್ಟ ಪ್ರಕರಣಗಳೇ ಹೆಚ್ಚು. ಸರ್ಕಾರದ ನಿಯಮದ ಪ್ರಕಾರ ಬೈಕ್ ಸವಾರಿ ಮಾಡುವಂತಹ ವ್ಯಕ್ತಿಯು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು ಎಂದು ಕಡ್ಡಾಯ ಗೊಳಿಸುತ್ತಾ ಬಂದರೂ ವಾಹನ ಸವಾರರು ಇದಕ್ಕೆ ಸ್ಪಂದಿಸದೆ ತಮ್ಮ ಇಚ್ಚೆಯಂತೆ ವಾಹನಗಳನ್ನು ಓಡಿಸುತ್ತಿದ್ದಾರೆ.
ಇತ್ತೀಚೆಗೆ ಪರವಾನಗಿ ಹೊಂದದೆ ಇರುವಂತಹ ಮಕ್ಕಳು ಕೂಡ ವಾಹನ ಚಾಲನೆ ಮಾಡುತ್ತಿರು ವದು, ಪಟ್ಟಣದೊಳಗೆ ಅತಿ ವೇಗದಲ್ಲಿ ವಾಹನ ಚಲಾಯಿಸುವದು, ಸಿಕ್ಕ ಸಿಕ್ಕ ಕಡೆಗಳಲ್ಲಿ ವಾಹನ ನಿಲುಗಡೆ ಮಾಡುತ್ತಿರುವದು ಕಂಡುಬರುತ್ತಿದೆ. ಪೊಲೀಸ್ ಇಲಾಖೆಯು ಇದರತ್ತ ಗಮನ ಹರಿಸಿದಂತೆ ಕಂಡುಬರುತ್ತಿಲ್ಲ ಎಂಬದಾಗಿ ಸಾರ್ವಜನಿಕರು, ಪಾದಚಾರಿಗಳು ಹೇಳುತ್ತಾರೆ.
ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿರುವದರಿಂದ ಪಾದಚಾರಿಗಳಿಗೆ ಓಡಾಡಲು ಕೂಡ ಬಹಳ ಕಷ್ಟವಾಗುತ್ತಿದೆ ಎನ್ನುತ್ತಾರೆ. ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿ ಮಾಡುವದು ಅಲ್ಲದೆ ಪಟ್ಟಣ ದೊಳಗೆ ಹಾಗೂ ಇತರೆಡೆಗಳಲ್ಲಿ ಅತಿ ವೇಗದಲ್ಲಿ ವಾಹನ ಚಲಾಯಿಸುವದು ಹೇರಳವಾಗಿ ಕಂಡುಬರುತ್ತಿದೆ. ನಿತ್ಯ ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಪಾರ್ಕಿಂಗ್ ಸಮಸ್ಯೆ ಬಿಗಡಾಯಿಸಿದೆ.
ಹೆಲ್ಮೆಟ್ ಇಲ್ಲದೇ ವಾಹನ ಚಲಿಸುವ ಎಷ್ಟೋ ದ್ವಿಚಕ್ರ ವಾಹನಗಳು ಅಪಘಾತ ಸಂಭವಿಸಿ ಸವಾರರು ಸ್ಥಳದಲ್ಲಿಯೇ ತಲೆಗೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ ಘಟನೆಯನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಸರಕಾರ ಹೆಲ್ಮೆಟ್ಟನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾ ರಕ್ಷಣಾ ಇಲಾಖೆ, ಹೆಲ್ಮೆಟ್ ಧರಿಸದ ಸವಾರರಿಂದ ದಂಡ ವಸೂಲಿ, ಸೂಚನೆ, ಎಚ್ಚರಿಕೆ ನೀಡುವ ಕರ್ತವ್ಯವನ್ನು ನಿತ್ಯವೂ ಮಾಡುತ್ತಾ ಇರಬೇಕಿದೆ. ದಂಡ ಹಾಕುತ್ತಿದ್ದಾರೆ ಎಂದು ತಿಳಿದ ಕೂಡಲೇ ಸವಾರರು ಮಾತ್ರ ದೂರದಲ್ಲಿ ಪೆÇಲೀಸ್ ಸಿಬ್ಬಂದಿ ಹಾಗೂ ವಾಹನವನ್ನು ಗಮನಿಸಿದ ಕೂಡಲೇ ಪರಾರಿಯಾಗುತ್ತಾರೆ, ಅಲ್ಲದೆ ಮಾರ್ಗ ಬದಲಿಸಿ ಸಂಚಾರ ಮಾಡುತ್ತಾರೆ. ರಕ್ಷಣೆ ತಮಗಲ್ಲ ಅದೂ ಇಲಾಖೆಗೆ ಎಂಬ ಮನೋಭಾವನೆ ಸವಾರರದ್ದು. ಇಲ್ಲವೇ ತಕ್ಷಣ ಹೆಲ್ಮೆಟ್ ಧರಿಸುವ ಪರಿಪಾಠ ರೂಢಿಸಿಕೊಂಡಿದ್ದು, ಕೇವಲ ಇಲಾಖೆಯ ಭಯಕ್ಕಾಗಿ ಮಾತ್ರ ಹೆಲ್ಮೆಟ್ ಎಂದು ಭಾವಿಸಿದಂತೆ ಕಾಣುತ್ತಿದೆ.
ಎಲ್ಲಾ ದ್ವಿಚಕ್ರ ಸವಾರರು ಸುರಕ್ಷಿತ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವದು ಕಡ್ಡಾಯ. ನಿಯಮ ಉಲ್ಲಂಘಿಸಿದವರ ವಿರುದ್ಧ ಇಲಾಖೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲಾಖೆ ವತಿಯಿಂದ ಕೇವಲ ಜಾಗೃತಿ ಕಾರ್ಯಕ್ರಮ ಮಾಡುತ್ತಾ ಕುಳಿತರೆ ಪ್ರಯೋಜನ ಮಾತ್ರ ಶೂನ್ಯ. ದಂಡಂ ದಶಗುಣಂ ಎಂಬಂತೆ ಸವಾರರಿಗೆ ಬಿಸಿ ಮುಟ್ಟಿಸಿದರೆ ಮಾತ್ರ ಸವಾರರು ಕಾನೂನು ಹಾಗೂ ನಿಯಮ ಪಾಲನೆ ಮಾಡಬಹುದು.
- ರಜಿತ ಕಾರ್ಯಪ್ಪ