ವೀರಾಜಪೇಟೆ, ಜೂ. 26: ಸಾಮಾಜಿಕ ಕಳಕಳಿಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಹಿಂದೂ ಅಗ್ನಿ ದಳವು ಶಾಲಾ ವಿದ್ಯಾರ್ಥಿಗಳಿಗೆ ಕೊಡೆಗಳನ್ನು ವಿತರಿಸಿತು.

ಆರ್ಜಿ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1ನೇ ತರಗತಿಯಿಂದ 7ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೊಡೆಗಳ ವಿತರಣೆ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಮಾತನಾಡಿದ ಹಿಂದೂ ಅಗ್ನಿ ದಳ ಸಂಘಟನೆಯ ಸಂಚಾಲಕ ಡಿ.ಕೆ. ಪ್ರಸನ್ನ ಅವರು, ಸಂಘಟನೆಯು ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುತ್ತದೆ. ಸರ್ಕಾರಿ ಶಾಲೆಯನ್ನು ಗುರುತಿಸಿ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪಠ್ಯೇತರ ಸಾಮಗ್ರಿಗಳನ್ನು ವಿತರಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಕೊಡೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ವಸಂತಿ ಮಾತನಾಡಿ, ಸಂಘಟನೆಗಳು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದು ಸಂತೋಷದಾಯಕ ಬೆಳವಣಿಗೆಯಾಗಿದೆ. ಹಿಂದೂ ಅಗ್ನಿ ದಳವು ಈ ಶಾಲೆಗೆ ಸತತವಾಗಿ ವಿದ್ಯಾರ್ಥಿಗಳಿಗೆ ಪಠ್ಯೇತರ ಸಾಮಗ್ರಿಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉತ್ತೇಜನ ನೀಡುತ್ತಾ ಬಂದಿದೆ. ಮುಂದೆ ಉತ್ತಮ ಕಾರ್ಯಕ್ರಮ ನೀಡುತ್ತಾ ಜನಮಾನಸದಲ್ಲಿ ಹೆಸರುಗಳಿಸಲಿ ಎಂದು ಹಾರೈಸಿದರು.

ಶಾಲೆಯ ಒಟ್ಟು 51 ವಿದ್ಯಾರ್ಥಿಗಳಿಗೆ ಕೊಡೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಸದಸ್ಯರಾದ ಜನಾರ್ಧನ್ ಮೂರ್ತಿ, ಯೋಗೆಶ್ ನಾಯ್ಡು, ವಿ.ಎಸ್. ಕಿಸನ್, ಕಾನೂನು ಸಲಹೆಗಾರ ಟಿ.ಪಿ. ಕೃಷ್ಣ, ದಿನೇಶ್ ನಾಯರ್, ಹರ್ಷವರ್ಧನ ಮತ್ತು ಸಾಯಿನಾಥ್ ನಾಯಕ್ ಹಾಗೂ ಶಾಲೆಯ ಸಹ ಶಿಕ್ಷಕಿ ಪ್ರೇಮ ಕ್ರಾಸ್ತ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

- ಕೆ.ಕೆ.ಎಸ್.