ಶ್ರೀಮಂಗಲ, ಜೂ. 26: ಕೊಡಗು ಜಿಲ್ಲೆಯು ಸುತ್ತಲೂ ಅರಣ್ಯ ಪ್ರದೇಶವನ್ನು ಹೊಂದಿದ್ದು ಇಲ್ಲಿ ವನ್ಯ ಪ್ರಾಣಿಗಳು ಅರಣ್ಯದಂಚಿನ ಗ್ರಾಮಗಳಿಗೆ ನುಸುಳಿ ದಿನನಿತ್ಯ ಬೆಳೆ ಹಾನಿ ಮತ್ತು ಜೀವಹಾನಿ ಮಾಡುತ್ತಿರುವದು ಇಲ್ಲಿನ ಜನರು ಹಾಗೂ ಅರಣ್ಯ ಇಲಾಖೆಗೆ ನಿದ್ದೆ ಗೆಡಿಸಿದೆ.
ಕಳೆದ ಹಲವು ದಶಕದಿಂದ ಮಾನವ ಹಾಗೂ ವನ್ಯ ಪ್ರಾಣಿಗಳ ನಡುವಿನ ಸಂಘರ್ಷ ಇದ್ದರೂ ಕಳೆದ ಎರಡು ದಶಕಗಳಿಂದ ಇದರ ಹಾವಳಿ ವಿಪರೀತ ಎನ್ನುವಂತಾಗಿದೆ. ವನ್ಯ ಪ್ರಾಣಿಗಳ ಹಾವಳಿ ತಡೆಗೆ ಶಾಶ್ವತ ಯೋಜನೆ ರೂಪಿಸಲು ಜನರ ಒತ್ತಾಯ ಕೇಳಿ ಬರುತ್ತಿದ್ದರೂ ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಸರ್ಕಾರ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಅರಣ್ಯದಂಜಿನ ಗ್ರಾಮಗಳಲ್ಲಿ ಕಾಡಾನೆ ಮತ್ತು ಕಾಡೆಮ್ಮೆ ಹಾವಳಿಯಿಂದ ಬೆಳೆ ನಷ್ಟವಾಗುತ್ತಿದ್ದರೆ, ಕಾಡಾನೆಗಳು ಜನರ ಜೀವಕ್ಕೆ ಸಂಚಕಾರ ತಂದೊಡ್ಡುತ್ತಿವೆ. ಹುಲಿ ದಾಳಿಗೆ ಜಾನುವಾರುಗಳು ಬಲಿಯಾಗುತ್ತಿರುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ ಶಾಶ್ವತ ತಡೆ ಯೋಜನೆ ಮರೀಚಿಕೆ ಆಗುತ್ತಿದೆ.
ಈ ಹಿಂದೆ ವನ್ಯ ಪ್ರಾಣಿಗಳು ಅರಣ್ಯದಿಂದ ಗ್ರಾಮಕ್ಕೆ ನುಸುಳುವದನ್ನು ತಡೆಯಲು ಕಂದಕ, ನಂತರ ಸೋಲಾರ್ ಬೇಲಿ, ಕಾಂಕ್ರೀಟ್ ತಡೆಗೊಡೆ, ರೈಲ್ವೆ ಬ್ಯಾರಿಕೆಡ್ ನಿರ್ಮಾಣವಾಗಿದೆ. ಉತ್ತಮ ನಿರ್ವಹಣೆ ಇರುವೆಡೆ ಈ ಯೋಜನೆ ಯಶಸ್ವಿ ಕಂಡಿದೆ ನಿರ್ವಹಣೆ ಮಾಡಲು ಕೆಲವು ತಾಂತ್ರಿಕ ಸಮಸ್ಯೆ ಹಲವೆಡೆ ಕಂಡು ಬಂದಿರುವದು ನಿಜ.
ಇದರ ನಡುವೆ ಇದೀಗ ತೂಗು ಸೋಲಾರ್ ಬೇಲಿಯ ಯೋಜನೆ ಕೇಳಿಬರುತ್ತಿದ್ದು ವನ್ಯ ಪ್ರಾಣಿಗಳು ಅದರಲ್ಲೂ ಕಾಡಾನೆಗಳ ನುಸುಳು ತಡೆಗೆ ಪರಿಣಾಮಕಾರಿ ಎಂಬದು ಹಲವೆಡೆ ಸಾಬೀತಾಗಿದೆ.
ದಕ್ಷಿಣ ಕೊಡಗಿನ ಬ್ರಹ್ಮಗಿರಿ ಅಭಯಾರಣ್ಯದ ವ್ಯಾಪ್ತಿಗೆ ಬರುವ 64 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಶ್ರೀಮಂಗಲ ವನ್ಯಜೀವಿ ವಲಯ ವ್ಯಾಪ್ತಿಯ ಸರಹದ್ದಿನಲ್ಲಿ ಪ್ರಾಯೋಗಿಕವಾಗಿ ಈ ಸೋಲರ್ ತೂಗು ಬೇಲಿ ನಿರ್ಮಿಸಲಾಗಿದೆ.
ಜನರ ಸಮಸ್ಯೆಗೆ ಸ್ಪಂದಿಸುವ ಹಾಗೂ ಯುವ ಕ್ರೀಯಾಶೀಲ ಅಧಿಕಾರಿಯೆಂದೇ ಹೆಸರು ಪಡೆದಿರುವ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ್ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ದೊರೆಯುವ ಸಾಮಗ್ರಿಗಳನ್ನು ಬಳಸಿಕೊಂಡು ಸೋಲಾರ್ ತೂಗು ಬೇಲಿಯನ್ನು ನಿರ್ಮಿಸಿದ್ದಾರೆ. ಕುಟ್ಟ ಗ್ರಾ.ಪಂ. ವ್ಯಾಪ್ತಿಯ ಮಂಚಳ್ಳಿಯಲ್ಲಿ ಗ್ರಾಮಕ್ಕೆ ಅಧಿಕ ಪ್ರಮಾಣದಲ್ಲಿ ಕಾಡಾನೆಗಳು ನುಸುಳುತ್ತಿದ್ದ ಸ್ಥಳದ 120 ಮೀ. ನಲ್ಲಿ 6 ತಿಂಗಳ ಹಿಂದೆ ಅವರು ಪ್ರಾಯೋಗಿಕವಾಗಿ ತೂಗು ಬೇಲಿ ನಿರ್ಮಿಸಿದ್ದರು. ಈ ಸ್ಥಳದಲ್ಲಿ ಕಾಡಾನೆಗಳು ಗ್ರಾಮಕ್ಕೆ ನುಸುಳದೆ ಇದ್ದದ್ದನ್ನು ಗಮನಿಸಿ ಈ ಬೇಲಿಯು ಪರಿಣಾಮಕಾರಿಯಾಗುತ್ತದೆ ಎಂಬ ವಿಶ್ವಾಸ ಮೂಡಿಸಿದೆ.
ಈ ಹಿನ್ನೆಲೆಯಲ್ಲಿ ಶ್ರೀಮಂಗಲ ವನ್ಯಜೀವಿ ವಲಯ ವ್ಯಾಪ್ತಿಯ ಇರ್ಪುವಿನಿಂದ ಪಾಚಿಬೇಲ್ ವರೆಗೆ 10 ಕಿ.ಮೀ. ಅಂತರದಲ್ಲಿ ತೂಗುಬೇಲಿ ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಪ್ರತಿ ಕಿ.ಮೀ. ಗೆ ರೂ. 3 ಲಕ್ಷ ವೆಚ್ಚ ತಗುಲಲಿದ್ದು ಸುಮಾರು ರೂ. 30 ಲಕ್ಷದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆ ತಾ. 26 ರಿಂದ ಆರಂಭವಾಗಿದೆ ಈ ಮೂಲಕವಾದರೂ ವನ್ಯ ಪ್ರಾಣಿಗಳ ಹಾವಳಿಗೆ ತಡೆ ಬೀಳಲಿ ಎಂಬದು ಅರಣ್ಯದಂಚಿನ ಜನರ ವಿಶ್ವಾಸವಾಗಿದೆ.