ಶ್ರೀಮಂಗಲ, ಜೂ. 26: ದ. ಕೊಡಗಿನ ಶ್ರೀಮಂಗಲ ವ್ಯಾಪ್ತಿಯ ವಿವಿಧೆಡೆ ಕಳೆದ ಹಲವು ದಿನಗಳಿಂದ ಬೀಡುಬಿಟ್ಟಿರುವ 50 ಕ್ಕೂ ಹೆಚ್ಚು ಕಾಡಾನೆ ಹಿಂಡುಗಳಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗುತ್ತಿದ್ದು ಜನರು ಪ್ರಾಣಭಯದಿಂದ ಆತಂಕದಲ್ಲಿದ್ದಾರೆ. ಕಾಡಾನೆಗಳಿಗೆ ವಿದ್ಯುತ್ ತಂತಿಗಳು ಸ್ಪರ್ಶಿಸಿ ಸಾವು ಸಂಭವಿಸಬಹುದೆಂಬ ಮುನ್ನೆಚ್ಚರಿಕೆ ಯಿಂದ ರಾತ್ರಿ ಸಮಯದಲ್ಲಿ ವಿದ್ಯುತ್ ಸಂಪರ್ಕವನ್ನೂ ಈ ವ್ಯಾಪ್ತಿಯಲ್ಲಿ ಕಡಿತ ಮಾಡಲಾಗುತ್ತಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕೂಡಲೇ ಗಂಭೀರವಾಗಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಶ್ರೀಮಂಗಲ ವಲಯ ಅರಣ್ಯಾಧಿಕಾರಿಗಳ ಕಛೇರಿ ಎದುರು ರಾಜ್ಯ ರೈತ ಸಂಘದ ಪ್ರೊ. ನಂಜುಂಡ ಸ್ವಾಮಿ ಬಣದ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾ ಸಮಿತಿಯ ಅಧ್ಯಕ್ಷ ಚಿಮ್ಮಂಗಡ ಗಣೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೂಡಲೇ ಕಾಡಾನೆಗಳನ್ನು ಅರಣ್ಯಕ್ಕಟ್ಟಲು ತುರ್ತು ಕಾರ್ಯಾಚರಣೆ ಕೈಗೊಳ್ಳುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಶ್ರೀಮಂಗಲ ವನ್ಯ ಜೀವಿ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ್ ದಿಢೀರಾಗಿ ಕಾರ್ಯಾಚರಣೆ ಕೈಗೊಳ್ಳುವದು ಅಪಾಯಕಾರಿಯಾಗಿದೆ. ತೋಟದಲ್ಲಿ ಕಾರ್ಮಿಕರು ಕೆಲಸದಲ್ಲಿ ತೊಡಗಿ ರುತ್ತಾರೆ. ಸಾರ್ವಜನಿಕರು, ತೋಟದ ಮಾಲೀಕರು ವಿದ್ಯಾರ್ಥಿಗಳಿಗೂ ಈ ಬಗ್ಗೆ ಪೂರ್ವ ಮಾಹಿತಿ ನೀಡಿದ ನಂತರವೇ ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದರು.
ಮೇಲಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಪೊನ್ನಂಪೇಟೆ, ಶ್ರೀಮಂಗಲ, ನಾಗರಹೊಳೆ ಅರಣ್ಯ ವಲಯದ ಎಲ್ಲಾ ಸಿಬ್ಬಂದಿಗಳನ್ನು ಸೇರಿಸಿ ತಾ. 27 ರಂದು (ಇಂದು) ಕಾರ್ಯಾಚರಣೆ ಕೈಗೊಳ್ಳಲು ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.
ಈ ಸಂದರ್ಭ ಮಾತನಾಡಿದ ರೈತ ಸಂಘ ಜಿಲ್ಲಾ ಸಮಿತಿಯ ಅಧ್ಯಕ್ಷ ಚಿಮ್ಮಂಗಡ ಗಣೇಶ್ 2 ತಿಂಗಳ ಹಿಂದೆ ರಾಜ್ಯ ಹೆದ್ದಾರಿಯ ಬದಿಯಲ್ಲೇ ಬೆಳ್ಳಗಿನ ಜಾವ ರೈತನ ಮೇಲೆ ದಾಳಿ ನಡೆಸಿ ಕಾಡಾನೆ ಕೊಂದು ಹಾಕಿತ್ತು. ಇದೀಗ ಇದೇ ವ್ಯಾಪ್ತಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ಕಾಡಾನೆ ಹಿಂಡುಗಳು ಸೇರಿಕೊಂಡಿವೆ. ಇದರಿಂದ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡಲು ಪ್ರಾಣಭಯದಿಂದ ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ನಷ್ಟಗೊಂಡು ಸಂಕಷ್ಟದಲ್ಲಿರುವ ರೈತರಿಗೆ ಕಾಡಾನೆಗಳ ಹಾವಳಿಯಿಂದ ಮತ್ತಷ್ಟು ಬೆಳೆ ಹಾನಿಯಾಗುತ್ತಿದೆ.
ಸಂಜೆ 7 ಗಂಟೆಯ ನಂತರ ಶ್ರೀಮಂಗಲ ವ್ಯಾಪ್ತಿಯ ಕಾಡಾನೆ ಹಾವಳಿ ಇರುವ ಪ್ರದೇಶದಲ್ಲಿ ನಿರಂತರವಾಗಿ ವಿದ್ಯುತ್ ಕಡಿತ ಮಾಡಲಾಗುತ್ತದೆ. ತೋಟಗಳಲ್ಲಿ ಇರುವ ಕಾಡಾನೆಗಳಿಗೆ ವಿದ್ಯುತ್ ತಂತಿ ತಗಲಿ ಸಾಯುವ ಆತಂಕದಿಂದ ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆ ಸೇರಿಕೊಂಡು ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ತಾ. 27 ರಂದು (ಇಂದು) ಕಾರ್ಯಾಚರಣೆ ಕೈಗೊಂಡು ಎಲ್ಲಾ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕು. ಇಲ್ಲದಿದ್ದರೆ ಅರಣ್ಯ ಕಛೇರಿಯ ಎದುರು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ನಿರಂತರ ಪ್ರತಿಭಟನೆ ಮುಂದುವರೆಸುವದಾಗಿ ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಮುಖರಾದ ಮಚ್ಚಮಾಡ ರಂಜಿ, ಮಚ್ಚಮಾಡ ಬೋಸ್, ಐಯಮಾಡ ಹ್ಯಾರಿ, ಕೋಟ್ರಮಾಡ ಹರೀಶ್, ಬೊಜ್ಜಂಗಡ ಚಂಗಪ್ಪ, ಮಚ್ಚಮಾಡ ಪ್ರತು, ಕೊಳೇರ ಪೊನ್ನಣ್ಣ, ಮಚ್ಚಮಾಡ ಚೇತನ್, ಚಂಗುಲಂಡ ರಾಜಪ್ಪ, ಮಂಜೀರ ಸುರೇಶ್, ಎಸ್.ಎಸ್. ಪ್ರವೀಣ್, ತೀತೀರ ಚಿಣ್ಣಪ್ಪ, ಗುಡಿಯಂಗಡ ಮುತ್ತು ಮತ್ತಿತರರು ಹಾಜರಿದ್ದರು.