ಮಡಿಕೇರಿ, ಜೂ. 26: ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೊಡಗು ಜಿಲ್ಲಾಡಳಿತ, ಹೊಸ್ಕೇರಿ ಗ್ರಾಮ ಪಂಚಾಯತ್ ಹಾಗೂ ಭಾರತಿ ಹೈಸ್ಕೂಲ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಮರಗೋಡಿನ ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ತಾ. 28 ರಂದು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವಸ್ತುಗಳ ಮರುಬಳಕೆ ಮತ್ತು ಕಸದಿಂದ ರಸ ಕರಕುಶಲ ವಸ್ತುಪ್ರದರ್ಶನ ಜರುಗಲಿದೆ. ವಸ್ತುಪ್ರದರ್ಶನವನ್ನು ಕಾಂತೂರು ಮೂರ್ನಾಡು ಜಿಲ್ಲಾ ಪಂಚಾಯತ್ ಸದಸ್ಯೆ ಕಲಾವತಿ ಉದ್ಘಾಟಿಸಲಿದ್ದಾರೆ. ಹೊಸ್ಕೇರಿ ಪಂಚಾಯತ್ ಅಧ್ಯಕ್ಷೆ ಪಿ.ಎನ್ ಮಮತ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಮರಗೋಡು ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯ ಅಪ್ರು ರವೀಂದ್ರ, ಭಾರತಿ ಹೈಸ್ಕೂಲ್ ಸೊಸೈಟಿ ಉಪಾಧ್ಯಕ್ಷ ಕೋಚನ ಲವಿನ್, ಹೊಸ್ಕೇರಿ ಪಂಚಾಯತ್ ಪಿ.ಡಿ.ಒ ಅಂಜನಮೂರ್ತಿ, ಪ್ರಾಂಶುಪಾಲ ಹೆಚ್.ಬಿ. ಬೆಳ್ಯಪ್ಪ ಪಾಲ್ಗೊಳ್ಳುವರು.