*ಗೋಣಿಕೊಪ್ಪಲು, ಜೂ. 26: ಪ್ರಜಾಪ್ರಭುತ್ವದ ಪರಿಕಲ್ಪನೆಯಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ವಿದ್ಯಾರ್ಥಿ ನಾಯಕರ ಆಯ್ಕೆಗೆ ಮತದಾನ ಕ್ರಿಯೆ ನಡೆಸುವ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯಲ್ಲಿ ಶಾಲಾ ನಾಯಕರ ಆಯ್ಕೆಗಾಗಿ ಮತದಾನ ನಡೆಯಿತು. ಶಾಲಾ ನಾಯಕ (ಪ್ರಧಾನಿ) ಮತ್ತು ಇತರ ಪದಾಧಿಕಾರಿಗಳ ಆಯ್ಕೆಗೆ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಇದಕ್ಕಾಗಿ 2 ವಿಶೇಷ ಅಂಕಣ ಮತ್ತು 2 ಮತ ಪೆಟ್ಟಿಗೆ ವ್ಯವಸ್ಥೆ ಮಾಡಲಾಗಿತ್ತು.

ಚುನಾವಣೆಗೆ ಸ್ಪರ್ಧಿಸಿದ ವಿದ್ಯಾರ್ಥಿಗಳು ರೂ. 50 ಠೇವಣಿಯೊಂದಿಗೆ ಚುನಾವಣಾಧಿಕಾರಿ ಮತ್ತು ಶಾಲೆಯ ಮುಖ್ಯ ಶಿಕ್ಷಕ ರತೀಶ್ ರೈ ಅವರಿಗೆ ನಾಮಪತ್ರ ಸಲ್ಲಿಸಿದ್ದರು.

ನಂತರ ವಿವಿಧ ತರಗತಿಗಳಿಗೆ ತೆರಳಿ ತಾವು ಮಾಡುವ ಕಾರ್ಯಗಳ ಬಗ್ಗೆ ಆಶ್ವಾಸನೆ ನೀಡಿದರು. ಮತದಾನಕ್ಕಾಗಿ ದಿನಾಂಕ ನಿಗದಿ ಮಾಡಿದ ಚುನಾವಣಾಧಿಕಾರಿ ವಿವಿಧ ಶಿಕ್ಷಕರನ್ನು ಚುನಾವಣೆಯ ಕಾರ್ಯಕ್ಕೆ ನಿಯೋಜಿಸಿದ್ದರು. ಮಕ್ಕಳ ಎದುರೇ ಮತ ಎಣಿಕೆ ನಡೆಸಿದ ಶಿಕ್ಷಕರು ಫಲಿತಾಂಶದ ಪಟ್ಟಿಯನ್ನು ಚುನಾವಣಾಧಿಕಾರಿಯವರಿಗೆ ಸಲ್ಲ್ಲಿಸಿದರು. ಪ್ರಧಾನಿಯಾಗಿ ಅರ್ಫಿಯ. ಶಾಲಾ ಕಾರ್ಯದರ್ಶಿಯಾಗಿ ಕೃಷಿಕ, ಕ್ರೀಡಾ ಮಂತ್ರಿಯಾಗಿ ನಿತಿನ್ ಆಯ್ಕೆಯಾದರು.

9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ಹೊಸದಾಗಿ 8ನೇ ತರಗತಿಗೆ ಸೇರಿದ ವಿದ್ಯಾರ್ಥಿಗಳನ್ನು ಆದರದಿಂದ ಬರಮಾಡಿಕೊಂಡರು. ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಾಲೆಯ ವಿಶೇಷತೆಗಳಾದ ಸತತ 18 ವರ್ಷಗಳಿಂದ ಕೊಡುತ್ತಿರುವ ಉತ್ತಮ ಫಲಿತಾಂಶ, ಉತ್ತಮ ಬೋಧಕವರ್ಗ, ಉತ್ತಮ ಕ್ರೀಡಾಂಗಣ, ಶಾಲಾ ಪರಿಸರ, ಎನ್.ಸಿ.ಸಿ. ಘಟಕ, ವಿಜ್ಞಾನ ಸಂಘ, ಪರಿಸರ ಸಂಘ ಮತ್ತು ವಿವಿಧ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಬಗ್ಗೆ ಮಾಹಿತಿ ನೀಡಿದರು.

ವಿಜ್ಞಾನ ಶಿಕ್ಷಕ ಡಿ. ಕೃಷ್ಣಚೈತನ್ಯ ಹಾಗೂ ಇತರ ಶಿಕ್ಷಕರು ಈ ಸಂದರ್ಭ ಹಾಜರಿದ್ದರು.