ಮಡಿಕೇರಿ, ಜೂ. 26: ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗ ಕೇಂದ್ರ ವಾಣಿಜ್ಯ ಖಾತೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಮನವಿ ಸಲ್ಲಿಸಿದೆ. ಕಳೆದ ಬಾರಿಯ ಪ್ರಕೃತಿ ವಿಕೋಪದಲ್ಲಿ ಶೇ.35ರಿಂದ 100 ರಷ್ಟು ಬೆಳೆ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ಅಲ್ಲದೆ, ಮುಂದಿನ ಬೆಳೆ ಸಾಲವನ್ನು ಶೇ.3ರ ಬಡ್ಡಿದರದಲ್ಲಿ ನೀಡಬೇಕೆಂದು ಮನವಿ ಸಲ್ಲಿಸಲಾಯಿತು. ಸಂಸದರಾದ ಪ್ರತಾಪ್ ಸಿಂಹ, ಪ್ರಜ್ವಲ್ ರೇವಣ್ಣ, ಶೋಭಾ ಕರಂದ್ಲಾಜೆ ಹಾಗೂ ಪಿ.ಸಿ. ಮೋಹನ್ ಅವರುಗಳು ನಿಯೋಗದಲ್ಲಿದ್ದರು.