ವೀರಾಜಪೇಟೆ, ಜೂ. 26: ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡೂರು ಬಳಿ ತೋಟ ಕಾರ್ಮಿಕ ಮತ್ತೊಂದು ಪ್ರಕರಣದಲ್ಲಿ ಮಹಿಳೆಯರ ಮೇಲೆ ಕಾಡಾನೆ ದಾಳಿ ಮಾಡಿದೆ. ಇಬ್ಬರ ಸ್ಥೀತಿ ಗಂಭೀರವಾಗಿದ್ದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅಮತ್ತಿ ಒಂಟಿಯಂಗಡಿ ಎಡೂರು ಗ್ರಾಮ ಮುನಾವರ್ ಎಂಬವರ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಹಿಂಬದಿಯಿಂದ ಬಂದ ಒಂಟಿ ಸಲಗ ಚಾಮುಂಡಿ ಪೈಸಾರಿ ನಿವಾಸಿಗಳಾದ ಕಮಲ(53), ಅಮ್ಮಾಳು(60) ಇವರುಗಳ ಮೇಲೆ ಹಠಾತ್ ದಾಳಿ ಮಾಡಿದ ಪರಿಣಾಮ ಇಬ್ಬರ ಎದೆ ಸೊಂಟ ಹಾಗೂ ಕಾಲುಗಳು ಮುರಿದಿದೆ. ಜತೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೊನ್ನು ಹಾಗೂ ಸುಜಾತಾ ಜೋರಾಗಿ ಕಿರುಚಿಕೊಂಡಾಗ ಆನೆ ಓಡಿ ಹೋಯಿತು ಎಂದು ಪ್ರತ್ಯಕ್ಷದರ್ಶಿ ಪೊನ್ನು ಮಾಹಿತಿ ನೀಡಿದರು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.