ಮಡಿಕೇರಿ, ಜೂ. 26: ಮಡಿಕೇರಿಯ ಕನ್ನಂಡಬಾಣೆಯ ಬಾವಿ ಸನಿಹದ ಶೌಚಾಲಯ ಕಾಮಗಾರಿಯಿಂದ ಜಲಮೂಲಕ್ಕೆ ಧಕ್ಕೆ ಇಲ್ಲ. ಆದರೂ ಮಾಜಿ ಸದಸ್ಯ ಪೀಟರ್ ಅವರು ಆರೋಪ ಮಾಡಿರುವದಾಗಿ ಈ ವ್ಯಾಪ್ತಿಯ ಮಾಜಿ ಸದಸ್ಯೆ ಸಂಗೀತ ಪ್ರಸನ್ನ ತಿಳಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ನಾನು ಮಡಿಕೇರಿ ನಗರಸಭಾ ಸದಸ್ಯೆಯಾಗಿದ್ದ ಅವಧಿಯಲ್ಲಿ, ವಾರ್ಡ್‍ಗೆ ಸೇರುವ ಕನ್ನಂಡಬಾಣೆಯಲ್ಲಿ ಅನೇಕ ವರ್ಷಗಳಿಂದ ಶಿಥಿಲವಾಗಿದ್ದ ಪಂಪ್‍ಹೌಸ್‍ಗೆ ಕಾಯಕಲ್ಪ ನೀಡಲಾಗಿದೆ. ದಿನದ 24 ಗಂಟೆಗಳೂ ಬೇರೆ ಬೇರೆ ಪಾಳಿಯಲ್ಲಿ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ವಿಶ್ರಮಿಸಲು ಇಲ್ಲಿ ಯಾವದೇ ವ್ಯವಸ್ಥೆಗಳಿರಲಿಲ್ಲ. ಈ ಹಿನ್ನೆಲೆಯಲ್ಲಿ, ಪಂಪ್‍ಹೌಸ್ ಮೇಲ್ಭಾಗದಲ್ಲಿ ಹೊಸ ಪಂಪ್ ಹೌಸ್ ನಿರ್ಮಿಸಲಾಗಿದ್ದು, ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆಂದು ಶೌಚಾಲಯವನ್ನೂ ನಿರ್ಮಿಸಲಾಗಿದೆ. ಶೌಚಾಲಯದ ಪಿಟ್, ಜಲಮೂಲದಿಂದ ಕೆಳಭಾಗದಲ್ಲಿ ನಿರ್ಮಾಣವಾಗಿದ್ದು, ಯಾವದೇ ಕಾರಣಕ್ಕೂ ಇದರ ಕಲ್ಮಶ ಜಲಮೂಲ ಸೇರಲು ಸಾಧ್ಯವಿಲ್ಲ. ಇದು ಸಿಬ್ಬಂದಿಗಳಿಗೆ ಮಾತ್ರ ಸೀಮಿತವಾದ ಶೌಚಾಲಯವಾಗಿದ್ದು, ಸಾರ್ವಜನಿಕ ಶೌಚಾಲಯ ಅಲ್ಲ ಎಂದು ಹೇಳಿದ್ದಾರೆ.
ನೀರು ಸರಬರಾಜು ಸಿಬ್ಬಂದಿಗಳು ದಿನದ ಬಹುತೇಕ ಸಮಯಗಳಲ್ಲಿ, ಪಂಪ್‍ಹೌಸ್‍ನಲ್ಲಿ ಕೆಲಸ ಮಾಡುವದರಿಂದ ಇಲ್ಲಿ ಶೌಚಾಲಯ ಅಗತ್ಯವೆಂದು ಮನಗಂಡು ಕಾಮಗಾರಿ ನಡೆಸಲಾಗಿದೆ. ಅಲ್ಲದೆ, ಪಂಪ್‍ಹೌಸ್‍ನಿಂದ ಕೆಳಭಾಗದಲ್ಲಿ ಶೌಚಾಲಯದ ಪಿಟ್ ಇರುವದರಿಂದ, ಇದು ಮೇಲ್ಭಾಗದಲ್ಲಿರುವ ನೀರಿನ ಮೂಲ ಸೇರುವ ಸಾಧ್ಯತೆ ಇರುವದಿಲ್ಲ. ನೀರಿನ ಹರಿವು ಪಂಪ್‍ಹೌಸ್‍ನಿಂದ ಕೆಳಭಾಗಕ್ಕೆ ಇರುವದರಿಂದ ಕೆಳಭಾಗದಲ್ಲಿರುವ ಪಿಟ್‍ನಿಂದ ಮೇಲ್ಭಾಗದಲ್ಲಿರುವ ನೀರಿನ ಮೂಲಕ್ಕೆ ಧಕ್ಕೆಯಾಗುವದಿಲ್ಲ.
ಆದರೂ ಪೀಟರ್ ಅವರು, ಕಾಮಗಾರಿ ಬಗ್ಗೆ ಅನಗತ್ಯ ವಿರೋಧ ಮಾಡಿದ್ದಾರೆ. ಈ ಕಾಮಗಾರಿ ನಿರ್ಮಾಣದ ವೇಳೆ ಸಾರ್ವಜನಿಕರ ಯಾವದೇ ವಿರೋಧ ಕಂಡುಬರಲಿಲ್ಲ ಎಂದಿರುವ ಸಂಗೀತ ಕನ್ನಂಡಬಾಣೆ ಪಂಪ್‍ಹೌಸ್ ಶೌಚಾಲಯ ಕಾಮಗಾರಿ ಆರಂಭದ ವೇಳೆ ಹಿಂದಿನ ನಗರಸಭಾ ಆಯುಕ್ತರಾಗಿದ್ದ ಶುಭಾ, ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಇಂಜಿನಿಯರ್‍ಗಳು ಮತ್ತು ನಗರಸಭೆಯ ಕೆಲವು ಕೌನ್ಸಿಲರ್‍ಗಳು ಹಾಜರಿದ್ದರು. ಅಲ್ಲದೆ, ಕನ್ನಂಡಬಾಣೆ ಪಂಪ್‍ಹೌಸ್ ಬಳಿ ನಿರ್ಮಾಣವಾಗಿರುವ ಶೌಚಾಲಯ ಕಾಮಗಾರಿಯಿಂದ ಜಲಮೂಲಕ್ಕೆ ಯಾವದೇ ಧಕ್ಕೆಯಾಗದು ಎಂದು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.