ಮಡಿಕೇರಿ, ಜೂ. 26: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ನಿತ್ಯ ಪ್ರಯಾಣಿಸಲು ಸರಕಾರದಿಂದ ಉಚಿತ ಬಸ್ ಪಾಸ್ ತಡೆಹಿಡಿಯಲಾಗಿದೆ. ಬದಲಾಗಿ ರಾಜ್ಯ ಸಾರಿಗೆ ಸಂಸ್ಥೆ ನಿಗದಿಗೊಳಿಸಿರುವ ಹಣ ಪಾವತಿಸಿ ಆಯಾ ಶಾಲಾ- ಕಾಲೇಜುಗಳ ಮುಖ್ಯಸ್ಥರು ಆನ್‍ಲೈನ್ ಮುಖಾಂತರ ಇಲಾಖೆಯೊಂದಿಗೆ ವ್ಯವಹರಿಸಿ ಮಕ್ಕಳಿಗೆ ಬಸ್ ಪಾಸ್ ಕಲ್ಪಿಸಲು ನಿರ್ದೇಶಿಸಲಾಗಿದೆ. ಆನ್‍ಲೈನ್ ವ್ಯವಸ್ಥೆ ಪ್ರಥಮವಾಗಿ ಜಾರಿಗೊಂಡಿದೆ.ಇದೇ ತಾ. 19ರಿಂದ ರಾಜ್ಯ ಸಾರಿಗೆ ಸಂಸ್ಥೆ ಬಸ್ ಪಾಸ್ ಪಡೆಯಲು ಆನ್‍ಲೈನ್ ಮುಖಾಂತರ ವ್ಯವಸ್ಥೆ ಕಲ್ಪಿಸಿದೆ. ಜಿಲ್ಲೆಯ ಕುಶಾಲನಗರ, ಮಡಿಕೇರಿ, ಗೋಣಿಕೊಪ್ಪಲು, ವೀರಾಜಪೇಟೆ, ಹೆಬ್ಬಾಲೆ ನಿಲ್ದಾಣಗಳಲ್ಲಿ ಸಾರಿಗೆ ಕೇಂದ್ರದಿಂದ ಸೌಲಭ್ಯಕ್ಕೆ ಅನುಕೂಲತೆ ಕಲ್ಪಿಸಲಾಗಿದೆ.ಪ್ರಾಥಮಿಕ ಶಾಲಾ ಶುಲ್ಕ : ರಾಜ್ಯ ಸರಕಾರದಿಂದ ಸಾರಿಗೆ ಸಂಸ್ಥೆ ನಿರ್ದೇಶನದಂತೆ ಶೈಕ್ಷಣಿಕ ವರ್ಷದ ಹತ್ತು ತಿಂಗಳ ಅವಧಿಗೆ ಪ್ರಸಕ್ತ ಸಾಲಿನಲ್ಲಿ ಕೆ.ಎಸ್..ಆರ್.ಟಿ.ಸಿ. ಬಸ್ ಪಾಸ್ ಪಡೆಯುವ ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ಸಹಿತ ಎಲ್ಲಾ ವಿದ್ಯಾರ್ಥಿಗಳು, ಪ್ರಾಥಮಿಕ ಶಾಲಾ ಹಂತದಲ್ಲಿ ರೂ. 150 ಪಾವತಿಸಿ ಶಿಕ್ಷಣ ಸಂಸ್ಥೆ ಮೂಲಕ ಪಾಸ್ ಹೊಂದಿಕೊಳ್ಳಬೇಕು.
ಪ್ರೌಢಶಾಲೆ : ಪ್ರೌಢಶಾಲೆಗಳ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಲಾ ರೂ. 15ರಂತೆ ಪಾವತಿಸಿ ಬಸ್ ಪಾಸ್ ಪಡೆದುಕೊಳ್ಳಬಹುದು.
ಇತರ ಎಲ್ಲ ವಿದ್ಯಾರ್ಥಿಗಳು ರೂ. 750-ರಂತೆ ಪಾವತಿಸಬೇಕಿದ್ದು, ವಿದ್ಯಾರ್ಥಿನಿಯರು ತಲಾ ರೂ. 550ರಂತೆ ನೀಡಿ ಬಸ್ ಪಾಸ್ ಪಡೆದುಕೊಳ್ಳಬಹುದು.
ಪಿ.ಯು.ಸಿ. ಮೇಲ್ಪಟ್ಟು : ಪಿ.ಯು.ಸಿ.ಯಿಂದ ಅಂತಿಮ ಪದವಿ ಹಾಗೂ ಡಿಪ್ಲೋಮಾ ಶಿಕ್ಷಣ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಎಲ್ಲಾ ವಿದ್ಯಾರ್ಥಿಗಳು ರೂ. 150ರಂತೆ ಹಣ ಪಾವತಿಸಬೇಕು. ಹಿಂದುಳಿದ ಮತ್ತು ಇತರ ಎಲ್ಲರೂ ಕೂಡ ರೂ. 1050ರಂತೆ ಹಣ ಪಾವತಿಸಿ ಬಸ್ ಪಾಸ್ ಪಡೆಯಬೇಕು.
ವೃತ್ತಿಪರ : ಇನ್ನು ವೃತ್ತಿಪರ ಶಿಕ್ಷಣ ಪಡೆಯುವ ಪರಿಶಿಷ್ಟ ಜಾತಿ ಮತ್ತು ಜನಾಂಗದ ವಿದ್ಯಾರ್ಥಿಗಳು ರೂ. 150 ಶುಲ್ಕ ಪಾವತಿಸಬೇಕು. ಇತರ ಎಲ್ಲ ವರ್ಗಗಳಿಗೆ ಸೇರಿದ ಮಕ್ಕಳು ತಲಾ ರೂ. 1550 ಮೊತ್ತವನ್ನು ಸಾರಿಗೆ ಸಂಸ್ಥೆಗೆ ಸಲ್ಲಿಸಬೇಕು.
ಸಂಜೆ ಕಾಲೇಜು : ಸಂಜೆ ಕಾಲೇಜು, ಪಿ.ಹೆಚ್.ಡಿ. ಇತ್ಯಾದಿ ಶಿಕ್ಷಣ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ರೂ.150 ಪಾವತಿ ಮಾಡಬೇಕು, ಮಿಕ್ಕ ಎಲ್ಲರೂ ರೂ. 1350 ಪಾವತಿಸಿ ಮುಂದಿನ 10 ತಿಂಗಳಿಗೆ ಬಸ್ ಪಾಸ್ ಹೊಂದಿಕೊಳ್ಳಬೇಕಿದೆ.
ಐ.ಟಿ.ಐ. ಶಿಕ್ಷಣ : ಮತ್ತೊಂದೆಡೆ ತಾಂತ್ರಿಕ ಶಿಕ್ಷಣ (ಐ.ಟಿ.ಐ.) ವಿದ್ಯಾರ್ಥಿಗಳು ತಮ್ಮ 12 ತಿಂಗಳ ಶೈಕ್ಷಣಿಕ ಅವಧಿಗೆ ಬಸ್ ಪಾಸ್ ಪಡೆಯಲು ಎಸ್.ಸಿ. ಹಾಗೂ ಎಸ್.ಟಿ. ವರ್ಗಕ್ಕೆ ರೂ.160 ನಿಗದಿಗೊಂಡಿದೆ. ಇತರ ಎಲ್ಲ ವಿದ್ಯಾರ್ಥಿಗಳು ರೂ. 1310 ಪಾವತಿಸಿ ಬಸ್ ಪಾಸ್ ಹೊಂದಿಕೊಳ್ಳಬಹುದು.
ಅರ್ಜಿ ಸಲ್ಲಿಸುವಿಕೆ : ಬಸ್ ಪಾಸ್‍ಗಾಗಿ ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಿಂದ ಆನ್‍ಲೈನ್ (ವೆಬ್‍ಸೈಟ್) ಮುಖಾಂತರ (ತಿತಿತಿ.ಞsಡಿಣಛಿ.iಟಿ) ವ್ಯವಹರಿಸುವಂತೆ ಸರಕಾರ ನಿರ್ದೇಶಿಸಿದೆ. ವಿದ್ಯಾರ್ಥಿಗಳು ಈ ಮೂಲಕ ಅರ್ಜಿಗಳನ್ನು ಭರ್ತಿಗೊಳಿಸಿ ಆಯ ಶಾಲಾ ಮುಖ್ಯಸ್ಥರಿಗೆ ಸಲ್ಲಿಸಬೇಕು.
(ಮೊದಲ ಪುಟದಿಂದ) ವಿದ್ಯಾರ್ಥಿಗಳು ಆನ್‍ಲೈನ್ ಮುಖಾಂ ತರ ಅರ್ಜಿಗಳಲ್ಲಿ ವಿವರಗಳನ್ನು ಭರ್ತಿಗೊಳಿಸಿದ ಬಳಿಕ, ಆಯ ಶಾಲಾ - ಕಾಲೇಜು ಮುಖ್ಯಸ್ಥರು ಪರಿಶೀಲಿಸಿ ಹಸ್ತಾಕ್ಷರದೊಂದಿಗೆ ಸಂಸ್ಥೆಯ ಮುದ್ರೆ ಒತ್ತಬೇಕು. ಬಳಿಕ ಸಾರಿಗೆ ಕೇಂದ್ರದೊಂದಿಗೆ ವ್ಯವಹರಿಸಿ ನಿಗದಿತ ಶುಲ್ಕವನ್ನು ಶಾಲಾ - ಕಾಲೇಜು ಮಕ್ಕಳಿಂದ ಪಡೆದು ಇಲಾಖೆಗೆ ಪಾವತಿಸಿ ಬಸ್ ಪಾಸ್‍ಗಳನ್ನು ಹೊಂದಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಬೇಕು. ಈ ಸಂದರ್ಭ ಅರ್ಜಿ ನಿಗದಿತ ಹಣದೊಂದಿಗೆ ವಿದ್ಯಾರ್ಥಿ ಗಳ ಸ್ಟ್ಯಾಂಪ್ ಗಾತ್ರದ ಭಾವಚಿತ್ರ, ಆಧಾರ್ ಕಾರ್ಡ್, ವಿದ್ಯಾಸಂಸ್ಥೆಗೆ ಪಾವತಿಸಿರುವ ಹಣದ ನಕಲು ಪ್ರತಿಗಳನ್ನು ಸಾರಿಗೆ ಕೇಂದ್ರಕ್ಕೆ ಸಲ್ಲಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಜನಾಂಗೀ ಯ ದೃಢೀಕರಣ ಪತ್ರ ಸಲ್ಲಿಸತಕ್ಕದ್ದು.
ಸಮಯಾವಕಾಶ : ಈ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಬಸ್ ಪಾಸ್ ಹೊಂದಿಕೊಂಡಿರುವ ವಿದ್ಯಾರ್ಥಿಗಳಿಗೆ ನವೀಕರಣಕ್ಕೆ ತಾ. 30ರ ತನಕ ಉಚಿತ ಪ್ರಯಾಣದೊಂದಿಗೆ ಕಾಲಾವಕಾಶ ನೀಡಲಾಗಿದೆ ಎಂದು ಸಾರಿಗೆ ಅಧಿಕಾರಿ ಖಚಿತಪಡಿಸಿದ್ದಾರೆ.