ವಿರೋಧದ ನಡುವೆಯೂ ನಿರ್ಮಾಣ ಆರೋಪ

ಮಡಿಕೇರಿ, ಜೂ. 26: ಮಡಿಕೇರಿ ನಗರದ ಜನತೆಗೆ ನೀರು ಪೂರೈಸುವ ಮೂಲಗಳಲ್ಲಿ ಒಂದಾಗಿರುವ ಕನ್ನಂಡಬಾಣೆಯ ಬಾವಿಯ ಸನಿಹದಲ್ಲೇ ಶೌಚಾಲಯ ನಿರ್ಮಾಣ ಮಾಡಿರುವದು ತೀರಾ ಖಂಡನೀಯ ಎಂದು ನಗರಸಭೆಯ ಮಾಜಿ ಸದಸ್ಯ ಹಾಗೂ ಮೂಡಾ ಮಾಜಿ ಅಧ್ಯಕ್ಷ ಚುಮ್ಮಿ ದೇವಯ್ಯ ಆಕ್ಷೇಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ಈ ಹಿಂದೆ ನಗರಸಭೆಯ ಆಡಳಿತ ಮಂಡಳಿ ಅಸ್ತಿತ್ವದಲ್ಲಿದ್ದ ಸಂದರ್ಭ ಈ ಕಾಮಗಾರಿಯ ಅನುಷ್ಠಾನಕ್ಕೆ ಮುಂದಾಗಿರುವ ಬಗ್ಗೆ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರು ತಮ್ಮ ಗಮನಕ್ಕೆ ತಂದಿದ್ದರು. ಇದರಂತೆ ನಗರಸಭೆಯ ಮಾಸಿಕ ಸಭೆಯಲ್ಲಿ ಇದಕ್ಕೆ ತಾವು ವಿರೋಧ ವ್ಯಕ್ತಪಡಿಸಿದ್ದಾಗಿ ಅವರು ತಿಳಿಸಿದ್ದಾರೆ. ಇದೀಗ ಚುನಾಯಿತ ಪ್ರತಿನಿಧಿಗಳು ಇಲ್ಲದ ಸಂದರ್ಭದಲ್ಲಿ ಬಾವಿಯ ಒತ್ತಿನಲ್ಲೇ ಶೌಚಾಲಯ ನಿರ್ಮಿಸಿರುವದು ಜನತೆಯ ಹಿತದೃಷ್ಟಿಯಿಂದ ಖಂಡನಾರ್ಹವಾಗಿದ್ದು, ಇದನ್ನು ಯಾವದೇ ಕಾರಣಕ್ಕೂ ಬಳಸಬಾರದು ಎಂದು ಅವರು ಒತ್ತಾಯಿಸಿದ್ದಾರೆ. ಮಾಜಿ ಸದಸ್ಯ ಪೀಟರ್ ಅವರು ಇದನ್ನು ಬೆಳಕಿಗೆ ತಂದಿರುವದನ್ನು ಸ್ವಾಗತಿಸಿರುವ ಅವರು ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು, ಕುಡಿಯುವ ನೀರಿನ ವಿಚಾರದಲ್ಲಿ ಯಾವದೇ ರಾಜಿ ಇಲ್ಲ ಎಂದು ಆಗ್ರಹಿಸಿದ್ದಾರೆ.

ಸಾರ್ವಜನಿಕ ವಲಯದಲ್ಲೂ ಈ ಬಗ್ಗೆ ಆಕ್ಷೇಪ ವ್ಯಕ್ತಗೊಳ್ಳುತ್ತಿದ್ದು, ಸಂಬಂಧಿಸಿದ ನಗರಸಭೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಚುಮ್ಮಿದೇವಯ್ಯ ಒತ್ತಾಯಿಸಿದ್ದಾರೆ.