ಸೋಮವಾರಪೇಟೆ,ಜೂ.26: ತಾಲೂಕಿನ ಬಾಣಾವರ ಮೀಸಲು ಅರಣ್ಯದ ಸಮೀಪವಿರುವ ಗ್ರಾಮಗಳಾದ ಸಿದ್ದಲಿಂಗಪುರ, ಚಿಕ್ಕಅಳುವಾರ, ಅರಸಿನಗುಪ್ಪೆ ಗ್ರಾಮದಲ್ಲಿ ಕಂಡುಬಂದ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನು ಅಳವಡಿಸಲಾಗಿದೆ.
ಈ ಭಾಗದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಚಿರತೆಗಳು ಚಿಕ್ಕಅಳುವಾರ ಗ್ರಾಮದಲ್ಲಿ ಒಂದು ಕರು ಹಾಗೂ ನಾಯಿಯನ್ನು ತಿಂದಿರುವ ಬಗ್ಗೆ ಗ್ರಾಮಸ್ಥರು ಸೋಮವಾರಪೇಟೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಆರ್.ಎಫ್.ಓ. ಲಕ್ಷ್ಮೀಕಾಂತ್ ನೇತೃತ್ವದ ತಂಡ, ಸ್ಥಳಕ್ಕೆ ಭೇಟಿ ನೀಡಿ ಗ್ರಾಮದ ಸಮೀಪದ ಕಾಡಿನಲ್ಲಿ ಚಿರತೆಯನ್ನು ಹಿಡಿಯಲು ಬೋನು ಇಟ್ಟಿದ್ದಾರೆ. ಕಳೆದ ವರ್ಷವೂ ಸಹ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು.
ಇದೀಗ ಚಿರತೆಗಳ ಓಡಾಟದಿಂದ ಗ್ರಾಮಸ್ಥರು ರಾತ್ರಿ ವೇಳೆ ಮನೆಯಿಂದ ಹೊರಹೋಗಲು ಭಯಪಡುತ್ತಿದ್ದಾರೆ. ಮಕ್ಕಳು, ವಿದ್ಯಾರ್ಥಿಗಳು ರಸ್ತೆಯಲ್ಲಿ ತಿರುಗಾಡಲು ಭಯಪಡುವಂತಾಗಿದೆ.