ಮಡಿಕೇರಿ, ಜೂ.26 : ನಗರದ ವಿವಿಧ ಬಡಾವಣೆÉಗಳಿಗೆ ಕುಡಿಯುವ ನೀರನ್ನು ಒದಗಿಸುವ ನಗರದ ಕನ್ನಂಡಬಾಣೆ ಬಾವಿ ಬಳಿಯಲ್ಲಿ ನಿರ್ಮಿಸಿರುವ ಶೌಚಾಲಯ ಬಳಕೆಗೆ ತಡೆ ನೀಡಿರುವ ಜಿಲ್ಲಾಡಳಿತ, ಇದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ನಗರಸಭೆಗೆ ಸ್ಪಷ್ಟ ನಿರ್ದೇಶನ ನೀಡಿದೆ.

ನಗರದ ಕನ್ನಂಡಬಾಣೆಯಲ್ಲಿರುವ ಬಾವಿಯಿಂದ ಕನ್ನಂಡಬಾಣೆ, ದೇಚೂರು, ಪುಟಾಣಿನಗರ, ಗೌಡ ಸಮಾಜ ಸುತ್ತಮುತ್ತಲ ಪ್ರದೇಶ ಹಾಗೂ ಜಿಲ್ಲಾ ಆಸ್ಪತ್ರೆಗೂ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಇಂತಹ ಪ್ರಮುಖ ಜಲಾಗಾರದ ಪಕ್ಕದಲ್ಲೇ ಯಾವದೇ ಮುಂದಾಲೋಚನೆಗಳಿಲ್ಲದೆ ನಗರಸಭೆ ಶೌಚಾಲಯ ನಿರ್ಮಿಸಿತ್ತು. ಈ ಅವ್ಯವಸ್ಥೆ ಬಗ್ಗೆ ಪತ್ರಿಕೆ ವರದಿ ಮಾಡಿ ಜಿಲ್ಲಾಡಳಿತದ ಗಮನ ಸೆಳೆದಿತ್ತು.

ಜಲಮೂಲದ ಬಳಿ ಶೌಚಾಲಯ ನಿರ್ಮಿಸಿರುವದನ್ನು ವಿರೋಧಿಸಿ ನಗರಸಭಾ ಮಾಜಿ ಸದಸ್ಯ ಕೆ.ಜಿ.ಪೀಟರ್ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಇಂದು ಯೋಜನಾ ನಿರ್ದೇಶಕರುಗಳನ್ನು ಸ್ಥಳಕ್ಕೆ ಕಳುಹಿಸಿದರು.

ವಿವಿಧ ಬಡಾವಣೆಗಳಿಗೆ ನೀರು ಪೂರೈಸುವ ಬಾವಿಯ ಬಳಿ ಶೌಚಾಲಯ ನಿರ್ಮಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅಧಿಕಾರಿಗಳು ಯಾವದೇ ಕಾರಣಕ್ಕೂ ಶೌಚಾಲಯದ ಬಳಕೆಗೆ ಅವಕಾಶ ನೀಡಬಾರದೆಂದು ಸ್ಥಳದಲ್ಲಿದ್ದ ಪೌರಾಯುಕ್ತ ರಮೇಶ್ ಅವರಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಅಗತ್ಯವಿದ್ದಲ್ಲಿ ದೂರದ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದರು.

ಜಿಲ್ಲಾಡಳಿತದ ತಕ್ಷಣದ ಕ್ರಮದಿಂದ ಸ್ಥಳೀಯ ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನಗರಸಭೆ ನಡೆಸಿರುವ ಅವೈಜ್ಞಾನಿಕ ಕಾಮಗಾರಿಯ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಅಸಮಾಧಾನ ವ್ಯಕ್ತಪಡಿಸಿದರು.