ವೀರಾಜಪೇಟೆ, ಜೂ, 26: ಬಿಟ್ಟಂಗಾಲದ ಕೂಲಿ ಕಾರ್ಮಿಕ ಸುಭಾಶ್‍ಚಂದ್ರ ಎಂಬವರ ಮಗ ಚಂದನ್ (12) ಅದೇ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದು ಇಂದು ಬೆಳಿಗ್ಗೆ 8-40ರ ಸಮಯದಲ್ಲಿ ತಮ್ಮ ಹಾಗೂ ತಂಗಿಯೊಂದಿಗೆ ಶಾಲೆಗೆ ಹೋಗುತ್ತಿದ್ದಾಗ ಬಿಟ್ಟಂಗಾಲದ ಆಲ್ಬರ್ಟ್ ಎಂಬವರ ತೋಟದಿಂದ ಬಂದ ಕಾಡಾನೆ ಏಕಾಏಕಿ ಶಾಲಾ ಬಾಲಕನ ಮೇಲೆ ಧಾಳಿ ನಡೆಸಿದೆ. ಇದೇ ಸಂದರ್ಭದಲ್ಲಿ ಚಂದನ್ ಹಾಗೂ ಇತರರು ಜೋರಾಗಿ ಕಿರುಚಿಕೊಂಡಾಗ ಚಂದನ್ ಮೇಲೆ ಧಾಳಿ ನಡೆಸಿ ಕಾಡಾನೆ ಓಡಿ ಹೋಗಿದೆ. ಬಾಲಕ ಚಂದನ್ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ತಲೆಗೆ 8 ಹೊಲಿಗೆ ಹಾಕಲಾಗಿದೆ. ಹೊಟ್ಟೆ, ಕೈ - ಕಾಲುಗಳಿಗೆ ತೀವ್ರ ಗಾಯವಾಗಿದೆ. ಬಾಲಕನನ್ನು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕತ್ಸೆಯ ನಂತರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. (ಮೊದಲ ಪುಟದಿಂದ) ಇಲ್ಲಿನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗ್ರಾಮಸ್ಥರ ಆಕ್ರೋಶ: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ 5 ಕಾಡಾನೆಗಳು ಸಂಚರಿಸುತ್ತಿದ್ದು, ಪ್ರತಿ ದಿನ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ನಾಶ ಪಡಿಸುತ್ತಿದೆ. ಅರಣ್ಯ ಇಲಾಖೆಗೆ ದೂರು ನೀಡಿದರೆ ನಾಮಕಾವಸ್ಥೆಗೆ ಕಾಡಿಗೆ ಅಟ್ಟುವ ಕಾರ್ಯ ಮಾಡುತ್ತಾರೆ. ಅರಣ್ಯ ಸಿಬ್ಬಂದಿ ತೆರಳಿದ ಕೂಡಲೇ ಕಾಡಾನೆಗಳು ಪುನ: ಗ್ರಾಮದ ಕಾಫಿ ತೋಟಕ್ಕೆ ಮರಳುತ್ತವೆ. ಇಲಾಖೆಯ ಪ್ರಯತ್ನಗಳು ಯಾವದೇ ಪ್ರಯೋಜನವಾಗುತ್ತಿಲ್ಲ. ನಾವುಗಳೇ ಕಾನೂನನ್ನು ಕ್ಯೆಗೆತ್ತಿಕೊಳ್ಳುವ ಪರಿಸ್ಥಿತಿಯನ್ನು ಅರಣ್ಯ ಇಲಾಖೆ ತಂದೊಡ್ಡುತ್ತಿದೆ ಎಂದು ಗ್ರಾಮಸ್ಥರಾದ ಕೋಲತಂಡ ರಘುಮಾಚಯ್ಯ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಟ್ಟಂಗಾಲದ ಮುಖ್ಯೋಪಾಧ್ಯಾಯರಾದ ಕಮಲಾಕ್ಷಿ ಟಿ.ಎನ್. ಅವರು ಎರಡು ವರ್ಷಗಳ ಹಿಂದೆ ಶಾಲೆಯ ವತಿಯಿಂದ ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆಗಳಿಗೆ ಕಾಡಾನೆಗಳ ಧಾಳಿಯ ಬಗ್ಗೆ ಮನವಿ ಸಲ್ಲಿಸಲಾಗಿದೆ ಬಹುತೇಕ ಈ ಭಾಗದಲ್ಲಿ ಕೂಲಿ ಅವಲಂಭಿತ ಕಾರ್ಮಿಕರ ಮಕ್ಕಳು ಶಾಲೆಗೆ ಬರುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕಾಡಾನೆಗಳ ಧಾಳಿಗೆ ಭಯಭೀತರಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಪೋಷಕರು ಹಿಂದೇಟು ಹಾಕುತ್ತಿದ್ದಾರೆ, ಇದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆಯು ಕ್ಷೀಣಿಸಿದೆ. ಅರಣ್ಯ ಇಲಾಖೆ ಕಾಡಾನೆ ಧಾಳಿಯನ್ನು ತಡೆಗಟ್ಟಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.