ಮಡಿಕೇರಿ, ಜೂ. 26 : ಮಕ್ಕಂದೂರು ಗ್ರಾ.ಪಂ ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮದ ಆವಂಡಿ ನಿವಾಸಿ ಕಾರ್ಯಪ್ಪ ಎಂಬವರು ಕಳೆದ ಸಾಲಿನ ಪ್ರಾಕೃತಿಕ ವಿಕೋಪದಲ್ಲಿ ತಾನು ಮನೆಯನ್ನು ಕಳೆÉದುಕೊಂಡಿರು ವದಾಗಿ ಸುಳ್ಳು ಮಾಹಿತಿಯನ್ನು ಒದಗಿಸಿ ಇತ್ತೀಚೆಗೆ ಗ್ರಾ.ಪಂ ಮೂಲಕ ವಸತಿ ಯೋಜನೆಯ ಸೌಲಭ್ಯ ಪಡೆಯಲು ಮುಂದಾಗಿದ್ದಾರೆ ಎಂದು ಗ್ರಾ.ಪಂ ಉಪಾಧ್ಯಕ್ಷ ಹಾಗೂ ಮುಕ್ಕೋಡ್ಲು ವಿಭಾಗದ ಗ್ರಾ.ಪಂ ಸದಸ್ಯ ಕನ್ನಿಕಂಡ ಶ್ಯಾಂ ಸುಬ್ಬಯ್ಯ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುವ ತಂತ್ರವನ್ನು ಬಳಸುತ್ತಿರುವ ಕಾರ್ಯಪ್ಪ ಅವರು, ಕಳೆÉದ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆಗೆ ಹಾನಿಯಾಗಿರುವದಾಗಿ ಹೇಳಿಕೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಅಥವಾ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತಿರು ವದಾಗಿ ಆರೋಪಿಸಿದರು.

ಕಳೆದ ಹತ್ತು ವರ್ಷಗಳಿಂದ ವಾಸವಿದ್ದ ಮನೆಯನ್ನು ತೊರೆದಿದ್ದ ಕಾರ್ಯಪ್ಪ ಅವರು ಮಡಿಕೇರಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆವಂಡಿ ಗ್ರಾಮದ ಮನೆ ಸೂಕ್ತ ನಿರ್ವಹಣೆ ಇಲ್ಲದೆ ಮೂರು ವರ್ಷಗಳ ಹಿಂದೆ ಕುಸಿದು ಬಿದ್ದಿತ್ತು. ಇದರ ಮಾಹಿತಿಯರಿತ ಅಧಿಕಾರಿಗಳು ಸರಕಾರದ ನಿಯಮದಂತೆ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿ ಗಳಾಗಲಿ, ಪಂಚಾಯಿತಿಯ ಆಡಳಿತ ಮಂಡಳಿಯಾಗಲಿ ಒತ್ತಡಕ್ಕೆ ಮಣಿಯದ ಹಿನ್ನೆಲೆಯಲ್ಲಿ ಇದೀಗ ಕಾರ್ಯಪ್ಪ ಅವರು ತಾನು ನ್ಯಾಯಾಲಯದ ಮೊರೆ ಹೋಗುವ ದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಶ್ಯಾಂ ಸುಬ್ಬಯ್ಯ ದೂರಿದರು.

ಕಾರ್ಯಪ್ಪ ಅವರು ಹಿಂದೆ ವಾಸವಿದ್ದ ಮನೆಯ ಕೆಲವೇ ಅಡಿಗಳ ಅಂತರದಲ್ಲಿ ತಾನು ವಾಸವಿದ್ದು, ಇವರ ಮನೆ ಮೂರು ವರ್ಷಗಳ ಹಿಂದೆಯೇ ನೆಲಕಚ್ಚಿರುವದನ್ನು ಗಮನಿಸಿದ್ದೇನೆ. ಅಲ್ಲದೆ, ಅವರು ಮೂರು ವರ್ಷಗಳಿಂದ ಪಂಚಾಯ್ತಿಗೆ ಕಂದಾಯ ಪಾವತಿಸಿರಲಿಲ್ಲ. ಆದರೆ, ಕಳೆದ ಡಿಸೆಂಬರ್‍ನಲ್ಲಿ ಪಂಚಾಯ್ತಿಗೆ ಬಂದು ಮನೆ ಕಂದಾಯ ಪಾವತಿಸಿ, ತಾನು ಅಲ್ಲೇ ವಾಸವಿದ್ದುದಾಗಿ ಬಿಂಬಿಸಲು ಮುಂದಾಗಿದ್ದಾರೆ. ಈ ಪ್ರಕರಣ ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ಬಾರದೇ ಇರುವ ಹಿನ್ನೆಲೆಯಲ್ಲಿ ಕಾರ್ಯಪ್ಪ ಅವರಿಗೆ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇದರ ಬಗ್ಗೆ ಪಂಚಾಯ್ತಿಯ ಸರ್ವ ಸದಸ್ಯರು ಒಮ್ಮತದ ಅಭಿಪ್ರಾಯ ಹೊಂದಿದ್ದಾರೆ ಎಂದು ಶ್ಯಾಂ ಸುಬ್ಬಯ್ಯ ಸ್ಪಷ್ಟಪಡಿಸಿದರು.

ಗ್ರಾ.ಪಂ. ಸದಸ್ಯ ಅಣ್ಣೆಚ್ಚಿರ ಸತೀಶ್ ಮಾತನಾಡಿ, ಮಕ್ಕಂದೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಈ ಬಾರಿ ಮಳೆಗಾಲದಲ್ಲಿ ಪಂಚಾಯ್ತಿ ವ್ಯಾಪ್ತಿಯ ಹೋಂ ಸ್ಟೇಗಳಲ್ಲಿ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸುವ ಮುನ್ನ ಎಚ್ಚರ ವಹಿಸುವಂತೆ ಹೋಂ ಸ್ಟೇ ಮಾಲೀಕರಿಗೆ ತಿಳುವಳಿಕೆ ನೋಟೀಸ್ ನ್ನು ನೀಡಲಾಗಿತ್ತು. ಆದರೆ, ಈ ವಿಚಾರ ಜಿಲ್ಲೆಯಾದ್ಯಂತ ಸಾಕಷ್ಟು ಚರ್ಚೆಗೆ ಮತ್ತು ಆಕ್ಷೇಪಕ್ಕೆ ಒಳಗಾಗಿತ್ತು. ಆದರೆ, ನೋಟೀಸ್ ನೀಡುವ ನಿರ್ಧಾರವನ್ನು ಪಂಚಾಯ್ತಿ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಕೈಗೊಳ್ಳಲಾಗಿತ್ತೇ ಹೊರತು, ಇದನ್ನು ಅಭಿವೃದ್ಧಿ ಅಧಿಕಾರಿ ಏಕಪಕ್ಷೀಯವಾಗಿ ಕೈಗೊಂಡಿರಲಿಲ್ಲವೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಂಚಾಯ್ತಿ ಸದಸ್ಯೆ ವಿಮಲಾ ರವಿ ಉಪಸ್ಥಿತರಿದ್ದರು.