ಮಡಿಕೇರಿ, ಜೂ. 25: ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಜಿಲ್ಲಾ ಸಮಿತಿಯ ಪ್ರಮುಖರ ಸಭೆ ನಗರದ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂಟದ ಜಿಲ್ಲಾಧ್ಯಕ್ಷ ಶೇಖರ್ ಭಂಡಾರಿ, ಕೊಡಗು ಜಿಲ್ಲೆಯಲ್ಲಿ ತುಳು ಭಾಷಿಕರ ಕ್ಷೇಮಾಭಿವೃದ್ಧಿಗೆ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಜಿಲ್ಲೆಯಲ್ಲಿ ತುಳು ಬಾಂಧವರ ಪದ್ಧತಿ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಹಲವು ಕಾರ್ಯ ಕ್ರಮಗಳನ್ನು ಆಯೋಜಿಸಲಾಗುವದು ಎಂದರು. ಜಿಲ್ಲಾ ಸಮಿತಿ ಸೇರಿದಂತೆ ಮೂರು ತಾಲೂಕು ಸಮಿತಿಗಳನ್ನು ಆಗಸ್ಟ್ ತಿಂಗಳಿನಲ್ಲಿ ಪುನರ್ ರಚಿಸಿ ಸಂಘಟನೆಯನ್ನು ಬಲಿಷ್ಠಗೊಳಿಸಲು ಕ್ರಮ ಕೈಗೊಳ್ಳಲಾಗುವದೆಂದರು.
ಜಿಲ್ಲಾ ಗೌರವ ಸಲಹೆಗಾರ ಬಿ.ಬಿ. ಐತ್ತಪ್ಪ ರೈ ಮಾತನಾಡಿ, ಗ್ರಾಮೀಣ ಪ್ರದೇಶಗಳಿಗೆ ಸಂಘದ ಪ್ರಮುಖರು ತೆರಳಿ ಸಂಘಟನೆಯನ್ನು ಬಲಪಡಿಸುವಂತೆ ಕರೆ ನೀಡಿದರು. ಜಿಲ್ಲಾ ಸ್ಥಾಪಕ ಸಲಹೆಗಾರ ಕೆ.ಆರ್. ಬಾಲಕೃಷ್ಣ ರೈ ಮಾತನಾಡಿ, ಸಂಘದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡುವ ಮೂಲಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗುವಂತೆ ನೋಡಿಕೊಳ್ಳ ಬೇಕೆಂದರು. ಆಗಸ್ಟ್ನಲ್ಲಿ ನಡೆಯುವ ಮಹಾಸಭೆಯಲ್ಲಿ ಸಮಿತಿಗಳನ್ನು ಉತ್ತಮ ರೀತಿಯಲ್ಲಿ ರಚಿಸುವಂತಾಗ ಬೇಕು ಎಂದರು. ಜಿಲ್ಲಾ ಉಪಾಧ್ಯಕ್ಷ ಬಿ.ವೈ. ಆನಂದರಘು ಮಾತನಾಡಿ, ಜಿಲ್ಲೆಯಲ್ಲಿ 13 ತುಳುಭಾಷಿಕ ಸಮುದಾಯವಿದ್ದು, ತುಳುವೆರ ಜನಪದಕೂಟದಲ್ಲಿ ತೊಡಗಿಸಿ ಕೊಂಡಿದ್ದಾರೆ. ಎಲ್ಲಾ ತುಳು ಸಮುದಾಯದ ಪ್ರಮುಖ ನಾಯಕರು ಕೂಟದ ಜವಾಬ್ದಾರಿಯುತ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಮೂಲಕ ಸಂಘಟನೆಗೆ ಶಕ್ತಿ ತುಂಬಬೇಕೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ಮಾತನಾಡಿ, ಜಿಲ್ಲೆಯಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವದರೊಂದಿಗೆ ತುಳು ಸಂಸ್ಕøತಿ ಯನ್ನು ಅನಾವರಣಗೊಳಿಸಬೇಕು. ಇದಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರ ಪಡೆಯ ಬೇಕೆಂದರು. ಸಭೆಯಲ್ಲಿ ಮಂಗಳೂರಿನ ಹರೀಶ್ ಆಳ್ವ ಸಂಘಟನೆಯನ್ನು ಬಲಪಡಿಸಲು ಪೂರಕವಾದ ಸಲಹೆ ಸೂಚನೆಗಳನ್ನು ನೀಡಿದರು. ಕೂಟದ ಜಿಲ್ಲಾ ಉಪಾಧ್ಯಕ್ಷೆ ಸಂಧ್ಯಾ ಗಣೇಶ್ ರೈ, ಮಡಿಕೇರಿ ತಾಲೂಕು ನಿರ್ದೇಶಕರುಗಳಾದ ಆರ್.ಬಿ. ರವಿ, ಲೀಲಾ ಶೇಷಮ್ಮ, ಮಡಿಕೇರಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್, ತಾಲೂಕು ಸದಸ್ಯ ಜಗದೀಶ್ ಆಚಾರ್ಯ ಸೇರಿದಂತೆ ಹಲವರು ಸೂಕ್ತ ಸಲಹೆಗಳನ್ನು ನೀಡಿದರು. ಪಿ.ಎಂ. ರವಿ ನಿರೂಪಿಸಿ, ವಂದಿಸಿದರು.