*ಸಿದ್ದಾಪುರ, ಜೂ. 25: ದಿನದಿಂದ ದಿನಕ್ಕೆ ಸರ್ವಾಂಗೀಣ ಅಭಿವೃದ್ಧಿಯತ್ತ ಮುಖ ಮಾಡಿ ಸಾಗುತ್ತಿರುವ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘವು ಸುಮಾರು ರೂ. 35 ಲಕ್ಷ ವೆಚ್ಚದಲ್ಲಿ ಅಥಿತಿ ಗೃಹ ಹಾಗೂ ವ್ಯಾಪಾರಿ ಮಳಿಗೆಯನ್ನು ನಿರ್ಮಿಸಲು ಮುಂದಾಗಿದೆ.
ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿಂದ ಚೆಟ್ಟಳ್ಳಿ ಗ್ರಾಮವೇ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಆಗಿದೆ. ಕೆಲ ವರ್ಷಗಳ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ರೈತ ಭವನ ಮತ್ತು ಸುಸಜ್ಜಿತ ಸಭಾಂಗಣವನ್ನು ನಿರ್ಮಿಸಿ ರಾಷ್ಟ್ರ ಮಟ್ಟದ ಗಮನ ಸೆಳೆದಿತ್ತು.
ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದಲ್ಲಿ ಕೆಲ ವರ್ಷಗಳ ಹಿಂದಿನವರೆಗೂ ಕಾರ್ಯ ನಿರ್ವಹಿಸುತ್ತಿದ್ದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಸವಾಲಾಗಿತ್ತು. ಮಾತ್ರವಲ್ಲ ಈ ಸಂದರ್ಭ ರೂ. 14 ಲಕ್ಷದಷ್ಟು ಸಾಲದ ಹೊರೆಯಿಂದ ಬ್ಯಾಂಕ್ ನಷ್ಟದ ಹಾದಿಯಲ್ಲಿತ್ತು.
ಈ ಸಂದರ್ಭ ಬ್ಯಾಂಕ್ ನಿರ್ಮಾಣವನ್ನು ಕೈಗೆತ್ತಿಕೊಂಡ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಸಂಘದ ನಿರ್ದೇಶಕರು, ಸದಸ್ಯರು, ಗ್ರಾಮದ ಕೃಷಿಕರು, ವ್ಯಾಪಾರಿಗಳನ್ನು ಒಗ್ಗೂಡಿಸಿ ಹೆಜ್ಜೆ ಹಾಕಿದರಿಂದ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಬ್ಯಾಂಕ್ ಕಟ್ಟಡ ಮಾತ್ರವಲ್ಲ ಚೆಟ್ಟಳ್ಳಿಗೆ ಅಗತ್ಯವಾಗಿ ಬೇಕಿದ್ದ ಮತ್ತು ಅನೇಕರ ಬೇಡಿಕೆಯಾಗಿದ್ದ ನರೇಂದ್ರ ಮೋದಿ ಹೆಸರಿನ ಭವನವನ್ನು ನಿರ್ಮಿಸಲಾಯಿತು. ಚೆಟ್ಟಳ್ಳಿ ಪಟ್ಟಣಕ್ಕೆ ಭಕ್ತಿ ಮತ್ತು ಸನಾತನ ಧಾರ್ಮಿಕ ಚಿಂತನೆಯನ್ನು ಹರಿಸುವ ನಿಟ್ಟಿನಲ್ಲಿ ಸಹಕಾರ ಸಂಘದ ಮುಂಭಾಗ ಕೊಡಗಿನ ಕುಲದೇವಿ ಕಾವೇರಿ ಮಾತೆಯ ಕಲ್ಲಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ನರೇಂದ್ರ ಮೋದಿ ಭವನದ ಎದುರು ಶ್ರೀ ಮಹಾ ಗಣಪತಿ, ಶ್ರೀ ಮಹಾವಿಷ್ಣು ಮತ್ತು ಶ್ರೀ ಆಂಜನೇಯ ದೇವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ನಿತ್ಯ ಎರಡು ವೇಳೆ ಪೂಜಾರ್ಚನೆಯ ವ್ಯವಸ್ಥೆ ಕಲ್ಪಿಸಲಾಗಿದೆ.
ದಿನದಿಂದ ದಿನಕ್ಕೆ ವಿಕಾಸ ಮತ್ತು ವಿಸ್ತಾರದ ಹಾದಿಯಲ್ಲಿರುವ ಚೆಟ್ಟಳ್ಳಿ ಸಹಕಾರ ಸಂಘವು ಗ್ರಾಮದ ಅಗತ್ಯ ಮತ್ತು ಜನರ ಬೇಡಿಕೆಗಳನ್ನು ಪೂರೈಸುತ್ತಾ ಯಶಸ್ವಿಯಾಗುತ್ತಿದೆ, ಈಗಾಗಲೇ ರೈತರಿಗೆ ಪಾರದರ್ಶಕ ಮತ್ತು ಸಮರ್ಪಕ ರೀತಿಯಲ್ಲಿ ಗೊಬ್ಬರ ಸೇರಿದಂತೆ ಕೃಷಿ ವ್ಯವಸ್ಥೆಗೆ ಅಗತ್ಯವಾಗಿರುವ ಇತರ ಸಲಕರಣೆಗಳನ್ನು ರಿಯಾಯಿತಿ ದರದಲ್ಲಿ ಪೂರೈಸುತ್ತಿದ್ದು ಇದಕ್ಕಾಗಿ ಈರಳವಳಮುಡಿಯಲ್ಲಿ ಮತ್ತೊಂದು ಗೋದಾಮು ನಿರ್ಮಿಸಲಾಗಿದೆ. ಕೊಡಗಿನ ಇತರ ಪಟ್ಟಣಗಳಂತೆ ಚೆಟ್ಟಳ್ಳಿ ಗ್ರಾಮವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಕೆಲ ಕೊರತೆಗಳನ್ನು ಮನಗಂಡ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅದನ್ನು ನೀಗಿಸಲು ಮುಂದಾಗಿದ್ದಾರೆ. ಕಳೆದ 17 ವರ್ಷಗಳಿಂದ ಸುದೀರ್ಘ ಅವಧಿಯವರೆಗೆ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಬಲ್ಲಾರಂಡ ಮಣಿ ಉತ್ತಪ್ಪ ತಮ್ಮ ಸೇವಾವಧಿಯಲ್ಲಿ ನೂತನ ಅಥಿತಿ ಗೃಹ ಮತ್ತು ವ್ಯಾಪಾರಿ ಮಳಿಗೆಯನ್ನು ನಿರ್ಮಿಸಲು ನಿರ್ದೇಶಕರುಗಳ, ಸಂಘದ ಸದಸ್ಯರು, ವರ್ತಕರು, ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರಲ್ಲಿ ಸಹಕಾರ ಕೋರಿದ್ದಾರೆ.
ಕೆಲ ವರ್ಷಗಳ ಹಿಂದೆ ನಷ್ಟಕ್ಕೆ ಈಡಾಗಿ ಇನ್ನೇನು ಮುಚ್ಚಿ ಹೋಗುತ್ತದೆ ಎಂಬ ಆತಂಕದಲ್ಲಿ ಇದ್ದ ಚೆಟ್ಟಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘ ಅಪೆಕ್ಸ್ ಬ್ಯಾಂಕ್ ಸೇರಿದಂತೆ ಜಿಲ್ಲೆ ಮತ್ತು ರಾಜ್ಯ ಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದು ಜನಮನ್ನಣೆಗಳಿಸಿ ಇತರ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮಾದರಿಯಾಗಿದೆ.
- ಅಂಚೆಮನೆ ಸುಧಿ