ಗೋಣಿಕೊಪ್ಪಲು, ಜೂ. 25: ಮುಂಜಾನೆ ಒಂದರ ಹಿಂದೆ ಒಂದು ವಾಹನಗಳು ಸಾಲು ಸಾಲಾಗಿ ರಸ್ತೆಯಲ್ಲಿ ಸಂಚರಿಸುತಿದ್ದವು, ಕುಗ್ರಾಮದಲ್ಲಿರುವ ಜನತೆ ಈ ಸನ್ನಿವೇಶವನ್ನು ಕಂಡು ಕುತೂಹಲಭರಿತವಾಗಿ ರಸ್ತೆ ಬದಿಯಲ್ಲಿ ನಿಂತಿದ್ದರು. ಕೊಡಗು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಅವರು ಮುಂಜಾನೆಯೆ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ತಮ್ಮ ವಾಹನದಲ್ಲಿ ಹೊರಟು ದ. ಕೊಡಗಿನ ಕುಗ್ರಾಮಗಳತ್ತ ತಮ್ಮ ಅಧಿಕಾರಿಗಳೊಂದಿಗೆ ಪ್ರಯಾಣ ಬೆಳೆಸಿದ್ದರು. ಬ್ರಹ್ಮಗಿರಿ ಅರಣ್ಯ ಪ್ರದೇಶ, ಬೊಮ್ಮಂಜಿಹೊಳೆ, ಕುಗ್ರಾಮದ ರಸ್ತೆಗಳು ಮಳೆಯಿಂದ ಹಾಳಾಗಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತ್ತು. ವಾಹನ ಸಂಚಾರ ಸಾಧ್ಯವಿಲ್ಲದಿರುವದನ್ನು ಅರಿತ ಜಿಲ್ಲಾಧಿಕಾರಿ ಕಾರಿನಿಂದ ಇಳಿದು ತಮ್ಮ ಕಾಲಿಗೆ ಶೂ ಧರಿಸಿ ತುಂತುರು ಮಳೆಯ ನಡುವೆ ಕಾಲು ನಡಿಗೆಯಲ್ಲಿಯೇ ಗುಡ್ಡವನ್ನು ಹತ್ತಿ ಇಲಾಖೆಯು ನಡೆಸಿರುವ ಆನೆ ಕಂದಕ, ಸೋಲಾರ್ ಹ್ಯಾಂಗಿಂಗ್ ಫೆನ್ಸ್ನ್ನು ಪರಿಶೀಲಿಸಿದರು. ದ. ಕೊಡಗಿನ ಕುಗ್ರಾಮಗಳಾದ ಈಸ್ಟ್ನೆಮ್ಮಲೆ, ವೆಸ್ಟ್ನೆಮ್ಮಲೆ, ಬೀರುಗ, ಕುರ್ಚಿ, ಬಿರುನಾಣಿ, ತೆರಾಲು, ಪರಕಟಗೇರಿ ಗ್ರಾಮದಲ್ಲಿ ವಾಸಿಸುವ ರೈತರು, ಬೆಳೆಗಾರರು ನಿರಂತರವಾಗಿ ಅನುಭವಿಸುತ್ತಿರುವ ದಿನನಿತ್ಯದ ಕಷ್ಟವನ್ನು ಖುದ್ದು ಪರಿಶೀಲಿಸಿದರು. ವನ್ಯಜೀವಿಗಳ ಉಪಟಳದಿಂದ ರೈತರು ಬೆಳೆದ ಫಸಲುಗಳು ಕಾಡಾನೆಯ ಪಾಲಾಗುತ್ತಿರುವದನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಇವುಗಳ ಕ್ರಮದ ಬಗ್ಗೆ ಸ್ಥಳದಲ್ಲಿದ್ದ ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ದ. ಕೊಡಗಿನ ವಿವಿಧ ಭಾಗದಲ್ಲಿ ರೈತರು, ಕಾಫಿ ಬೆಳೆಗಾರರು, ಕಾರ್ಮಿಕರು, ಕಾಡಾನೆ ಹಾವಳಿಯಿಂದ ನಿರಂತರ ತೊಂದರೆ ಅನುಭವಿಸುತ್ತಿರುವ ಬಗ್ಗೆ ಖುದ್ದು ಸ್ಥಳ ಪರಿಶೀಲನೆ ನಡೆಸುವಂತೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಮುಂದಾಳತ್ವದಲ್ಲಿ ರೈತ ಮುಖಂಡರು ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಗ್ರಾಮಕ್ಕೆ ಭೇಟಿ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಮಂಗಳವಾರ ಮುಂಜಾನೆ ತಮ್ಮ ಕಿರಿಯ ಅಧಿಕಾರಿಗಳೊಂದಿಗೆ, ಕುಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಇಲ್ಲಿಯ ನೈಜ ಪರಿಸ್ಥಿತಿಯನ್ನು ಅವಲೋಕಿಸಿದರು. ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಆಗಮಿಸುವ ವಿಚಾರ ತಿಳಿದ ಕುಗ್ರಾಮದ ಸುತ್ತಮುತ್ತ ವಾಸಿಸುವ ರೈತರು ಹಾಗೂ ಕಾಫಿ ಬೆಳೆಗಾರರು, ಸಾರ್ವಜನಿಕರು ರಸ್ತೆ ಬದಿಯಲ್ಲಿಯೇ ಗುಂಪು ಗುಂಪಾಗಿ ನಿಂತು ಜಿಲ್ಲಾಧಿಕಾರಿಗಳ ಆಗಮನಕ್ಕಾಗಿ ಕಾಯುತ್ತಿದ್ದರು.
ಜಿಲ್ಲಾಧಿಕಾರಿ ತಮ್ಮ ವಾಹನವನ್ನು ಗ್ರಾಮಸ್ಥರು ನೆರೆದಿರುವ ಸ್ಥಳಗಳಲ್ಲಿ ನಿಲ್ಲಿಸುವ ಮೂಲಕ ರೈತರ ಅಹವಾಲನ್ನು ಸ್ವೀಕರಿಸಿ ಸಮಸ್ಯೆಗಳ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕೂಡಲೇ ಕ್ರಮವಹಿಸಬೇಕೆಂದು ಸೂಚನೆ ನೀಡಿದರು.
ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆಯು ಅಳವಡಿಸಿರುವ ಸೋಲಾರ್ ಹ್ಯಾಂಗಿಂಗ್ ಫೆನ್ಸ್ನ್ನು ಪರಿಶೀಲಿಸಿ ಕಾಡಾನೆ ಮತ್ತೆ ರೈತರಿಗೆ ತೊಂದರೆ ನೀಡದಂತೆ ಅಗತ್ಯ ಕ್ರಮ ಕೈಗೊಳ್ಳಲು ಕಾಮಗಾರಿಯನ್ನು ಚುರುಕಾಗಿ ಮುಕ್ತಾಯ ಮಾಡಲು ನಿರ್ದೇಶನ ನೀಡಿದರು. ಕುಗ್ರಾಮಗಳಿಗೆ ನಿರಂತರವಾಗಿ ವಿದ್ಯುಚ್ಛಕ್ತಿ ಪೂರೈಕೆಯಲ್ಲಿ ಆಗುತ್ತಿರುವ ತೊಂದರೆ, ಬಿಎಸ್ಎನ್ಎಲ್ ಇಲಾಖೆಯಲ್ಲಿ ಸಿಬ್ಬಂದಿಗಳು ಸೂಕ್ತ ಸ್ಪಂದನೆ ನೀಡದೇ ಇರುವ ಬಗ್ಗೆ ರೈತ ಮುಖಂಡರು ವಿವರ ನೀಡಿದರು.
ಜಿಲ್ಲಾಧಿಕಾರಿ ಭೇಟಿ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ,
(ಮೊದಲ ಪುಟದಿಂದ) ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್, ಟಿ. ಶೆಟ್ಟಿಗೇರಿಯ ಚಟ್ಟಂಗಡ ಕಂಬಣ್ಣ ಕಾರ್ಯಪ್ಪ, ರೈತ ಮುಖಂಡರಾದ ಬೊಟ್ಟಂಗಡ ತಿಲಕ್, ದೇಕಮಾಡ ನವೀನ್, ಕೋದೇಂಗಡ ಸುರೇಶ್, ಗಾಂಡಂಗಡ ಉತ್ತಯ್ಯ, ಎಂ.ಬಿ. ಅಶೋಕ್, ತಹಶೀಲ್ದಾರ್ ಗೋವಿಂದರಾಜ್ ಶ್ರೀಮಂಗಲ ಅರಣ್ಯ ಇಲಾಖೆಯ ಅಧಿಕಾರಿಗಳಾದ ಎಸಿಎಫ್ ದಯಾನಂದ್, ಆರ್.ಎಫ್.ಓ. ವೀರೇಂದ್ರ, ರೆವೆನ್ಯೂ ಇಲಾಖೆಯ ದೇವಯ್ಯ, ಕಿಸಾನ್, ಪಿಡಿಓ ಸತೀಶ್, ಮುಂತಾದವರು ಹಾಜರಿದ್ದರು. -ಹೆಚ್.ಕೆ. ಜಗದೀಶ್