ಮಡಿಕೇರಿ, ಜೂ. 25: ಪ್ರಸಕ್ತ ವರ್ಷದ ಮುಂಗಾರು ಮಳೆ ಇದೀಗ ಜೂನ್ ತಿಂಗಳು ಮುಕ್ತಾಯ ಗೊಳ್ಳುವತ್ತ ತಲಪಿದರೂ ವಾಡಿಕೆಯಂತೆ ಆರಂಭಗೊಳ್ಳದೆ ಕೃಷಿ ಪ್ರಧಾನವಾದ ಮಲೆನಾಡು ಜಿಲ್ಲೆ ಕೊಡಗಿನಲ್ಲೂ ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿದೆ.ಕಳೆದ ವರ್ಷ ಬೇಸಿಗೆಯ ಅವಧಿಯಿಂದಲೇ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿತ್ತು. ಅದರಲ್ಲೂ ಜೂನ್ ತಿಂಗಳ ಎರಡನೇ ವಾರದಲ್ಲಿ ಜಿಲ್ಲೆಗೆ ಕಾಲಿಟ್ಟಿದ್ದ ಮುಂಗಾರು ಮಳೆ ಆರಂಭದಲ್ಲೇ ಅಬ್ಬರ ತೋರುವದ ರೊಂದಿಗೆ ಅಲ್ಲೋಲಕ ಲ್ಲೋಲವನ್ನುಂಟು ಮಾಡಿದ್ದು, ಇನ್ನೂ ಜನತೆಯ ಮನದಿಂದ ದೂರಾಗಿಲ್ಲ. ಜೂನ್ ಅಂತ್ಯಕ್ಕೆ ತಲಕಾವೇರಿಗೆ 115 ಇಂಚುಗಳಷ್ಟು ಭಾರೀ ಮಳೆ ಬಿದ್ದಿದ್ದರೆ, ಭಾಗಮಂಡಲಕ್ಕೂ 95.90 ಇಂಚು ಮಳೆಯಾಗಿತ್ತು. ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲೂ 65.45 ಇಂಚು ಮಳೆಯಾಗಿತ್ತಲ್ಲದೆ ಇಡೀ ಜಿಲ್ಲೆಯಲ್ಲಿ ಸರಾಸರಿ 40 ಇಂಚುಗಳಷ್ಟು ಮಳೆ ಹೆಚ್ಚಾಗಿತ್ತು.
ಆದರೆ 2019ರ ಚಿತ್ರಣ ಮತ್ತೊಂದು ರೀತಿಯಾಗಿದೆ. ವೀರಾಜಪೇಟೆ ತಾಲೂಕಿನ ಕೆಲವು ಭಾಗಗಳಲ್ಲಿ ಮಾತ್ರ ಮಳೆಯ ರಭಸ ಆಗಾಗ್ಗೆ ಕಂಡುಬಂದಿದೆ. ಜಿಲ್ಲೆಯ ಇನ್ನಿತರ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಿಲ್ಲ. ಆಗಾಗ್ಗೆ ಮೋಡ ಕವಿದ ವಾತಾವರಣ, ತುಂತುರು ಮಳೆಯಾಗುತ್ತಿದ್ದರೂ ಕೊಡಗಿನ ನೈಜ ಮುಂಗಾರು ಮಳೆಯ ಚಿತ್ರಣ ಎಲ್ಲೂ ಕಂಡು ಬಂದಿಲ್ಲ.
ಹವಾಮಾನ ಇಲಾಖೆಯ ಮಾಹಿತಿಯಂತೆ ಇದೀಗ ಮುಂಗಾರು ಮಳೆ ಮತ್ತೆ ಕ್ಷೀಣಗೊಂಡಿದೆ. ಬಿಸಿಲು-ಮಳೆಯ ಕಣ್ಣಾಮುಚ್ಚಾಲೆಯಾಟದ ನಡುವೆ ಪ್ರಸಕ್ತ ವರ್ಷದ ಕೃಷಿ ಚಟುವಟಿಕೆಗಳೂ ಜಿಲ್ಲೆಯಲ್ಲಿ ಹಿನ್ನಡೆಯಾಗಿದೆ. ಜಿಲ್ಲೆಯ ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆ ಬೀಳುವ ಸಂಭವ ಇರುವ ಕುರಿತು ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ಇದೀಗ ಮುಂಗಾರು ಕ್ಷೀಣಗೊಂಡಿದೆ ಯಾದರೂ ಜುಲೈ 1 ರಿಂದ ಚುರುಕು ಗೊಳ್ಳುವ ಸಾಧ್ಯತೆ ಇರುವದಾಗಿ ಕೇಂದ್ರ ಮುನ್ಸೂಚನೆ ನೀಡಿರುವದಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹವಾಮಾನದ ಕುರಿತಾದ ಮುನ್ಸೂಚನೆಯನ್ನು ನೀಡಿದೆ.
ಜಿಲ್ಲೆಯ ಮಳೆ ವಿವರ
ಪ್ರಸಕ್ತ ವರ್ಷ ಜನವರಿಯಿಂದ ಈ ತನಕ ಜಿಲ್ಲೆಯಲ್ಲಿ ಸರಾಸರಿ 13.93 ಇಂಚಿನಷ್ಟು ಮಾತ್ರ ಮಳೆಯಾಗಿದೆ. 2018ರಲ್ಲಿ ಈ ಪ್ರಮಾಣ 47.30 ಇಂಚಿನಷ್ಟಿತ್ತು.
ಮಡಿಕೇರಿ ತಾಲೂಕಿನಲ್ಲಿ ಈ ವರ್ಷ ಜನವರಿಯಿಂದ ಈತನಕ 17.67 ಇಂಚು ಮಳೆಯಾಗಿದ್ದರೆ ಕಳೆದ ವರ್ಷ 63.30 ಇಂಚು ಮಳೆ ಸುರಿದಿತ್ತು. ವೀರಾಜಪೇಟೆ ತಾಲೂಕಿನಲ್ಲಿ 2018ರಲ್ಲಿ 44.90 ಇಂಚು ಮಳೆಯಾಗಿದ್ದರೆ, ಈ ಬಾರಿ 16.81 ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ಬಾರಿ 33.71 ಇಂಚು ಹಾಗೂ ಈ ವರ್ಷ ಈತನಕ 7.32 ಇಂಚಿನಷ್ಟು ಮಾತ್ರ ಸರಾಸರಿ ಮಳೆಯಾಗಿದೆ. ವಾತಾವರಣದಲ್ಲಿ ಇನ್ನೂ ವಾಡಿಕೆಯಂತೆ ಮಳೆಗಾಲದ ನೈಜ ಚಿತ್ರಣ ಸ್ಥಿರತೆ ಕಾಣದಿರುವದರಿಂದ ಜಿಲ್ಲೆಯಲ್ಲಿನ ಜನತೆಯೂ ಈ ಸನ್ನಿವೇಶಕ್ಕೆ ಹೊಂದಿಕೆಯಾದಂತಿಲ್ಲ.