ಮಡಿಕೇರಿ, ಜೂ. 25 : ಭಾರತೀಯ ಜನತಾ ಪಾರ್ಟಿಯನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಜು.6ರಿಂದ ಆ.11ರವರೆಗೆ ದೇಶಾದ್ಯಂತ ‘ಸಂಘಟನ್ ಪರ್ವ’ ಸದಸ್ಯತ್ವ ಅಭಿಯಾನ ನಡೆಯಲಿದೆ. ಈ ಸಂದರ್ಭ ಕೊಡಗು ಜಿಲ್ಲೆಯಲ್ಲಿ ಒಂದು ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬಿಜೆಪಿ ಈಗಾಗಲೇ ಸಮಾಜದ ಎಲ್ಲಾ ವರ್ಗದ ಜನರನ್ನು ತಲಪುವದರೊಂದಿಗೆ ವಿಶ್ವದ ಬಲಿಷ್ಠ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ದೇಶದಲ್ಲಿ ಸುಮಾರು 11 ಕೋಟಿ ಸಕ್ರಿಯ ಸದಸ್ಯರನ್ನು ಪಕ್ಷ ಹೊಂದಿದ್ದು, ಕರ್ನಾಟಕದಲ್ಲಿ 83 ಲಕ್ಷ ಹಾಗೂ ಕೊಡಗು ಜಿಲೆಯಲ್ಲಿ 45 ಸಾವಿರ ಸದಸ್ಯರು ನೋಂದಣಿ ಮಾಡಿ ಕೊಂಡಿದ್ದಾರೆ ಎಂದು ಹೇಳಿದರು.

ಪ್ರತೀ ಆರು ವರ್ಷಗಳಿಗೊಮ್ಮೆ ಪಕ್ಷದ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಅದರಂತೆ ಈ ಬಾರಿ ಜು.6ರಿಂದ ಆ.11 ರವರೆಗೆ ಅಭಿಯಾನ ನಡೆÀಯಲಿದೆ. ಸದಸ್ಯರಾಗಲು ಬಯಸುವವರು ಜು. 6 ರಿಂದ 8980808080 ಸಂಖ್ಯೆಗೆ ಉಚಿತ ಕರೆ (ಮಿಸ್ಡ್ ಕಾಲ್) ನೀಡುವ ಮೂಲಕ ನೋಂದಾಯಿಸಿ ಕೊಳ್ಳಬಹುದು. ಈ ರೀತಿ ಕರೆ ಮಾಡಿದ ಸದಸ್ಯರಿಗೆ ಅವರ ವಿಳಾಸ ನೀಡುವಂತೆ ಎಸ್‍ಎಂಎಸ್ ಬರಲಿದ್ದು, ಆ ಸಂದರ್ಭ ತಮ್ಮ ವಿಳಾಸವನ್ನು ನೀಡುವ ಮೂಲಕ ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಈ ಬಾರಿ ‘ಸಾಥ್ ಆಯೇ-ದೇಶ್ ಬನಾಯೇ’ ಎಂಬ ಘೋಷ ವಾಕ್ಯದೊಂದಿಗೆ ಸದಸ್ಯತ್ವ ಅಭಿಯಾನ ನಡೆಯಲಿದ್ದು, ರಾಜಕೀಯದ ಮೂಲಕ ದೇಶ ಸೇವೆ ಮಾಡಲಿಚ್ಛಿಸುವ ಯುವಜನರು, ಎನ್‍ಜಿಒಗಳು, ಎಲ್ಲಾ ಕೂಲಿ ಕಾರ್ಮಿಕರಿಂದ ಹಿಡಿದು ಕೈಗಾರಿಕೋದ್ಯಮಿಗಳವರೆಗಿನ ಜನರು ಈ ಸದಸ್ಯತ್ವ ಅಭಿಯಾನದಲ್ಲಿ ಭಾಗಿಯಾಗಬಹುದಾಗಿದೆ ಎಂದು ತಿಳಿಸಿದರು.

ಕಳೆದ ಬಾರಿ ಕೊಡಗು ಜಿಲ್ಲೆಯಲ್ಲಿ 45 ಸಾವಿರ ಮಂದಿ ಸದಸ್ಯರನ್ನು ನೋಂದಾಯಿಸಲಾಗಿದ್ದು, ಈ ಬಾರಿ ಒಂದು ಲಕ್ಷಕ್ಕೆ ತಲಪಿಸುವ ಗುರಿ ಹೊಂದಲಾಗಿದೆ. ಸದಸ್ಯತ್ವ ನೋಂದಾವಣಿಯ ಜವಾಬ್ದಾರಿಗಾಗಿ ಜಿಲ್ಲಾ ಸಂಚಾಲಕರಾಗಿ ಶಾಂತೆಯಂಡ ರವಿಕುಶಾಲಪ್ಪ, ಸಹ ಸಂಚಾಲಕರಾಗಿ ನಾಪಂಡ ರವಿ ಕಾಳಪ್ಪ ಹಾಗೂ ದಾಖಲಾತಿ ಪ್ರಮುಖರಾಗಿ ವಿ.ಕೆ. ಲೋಕೇಶ್ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಸದಾನಂದಗೌಡರೊಂದಿಗೆ ಚರ್ಚೆ: ಪ್ರಕೃತಿ ವಿಕೋಪ ಸಂತ್ರಸ್ತರ ನಿರ್ವಹಣೆ ಸೇರಿದಂತೆ ವಿವಿಧ ವಿಚಾರಗಳ ವೈಫಲ್ಯದ ಬಗ್ಗೆ ಬಿಜೆಪಿ ಹೋರಾಟದ ಎಚ್ಚರಿಕೆ ನೀಡಿದ ಬಳಿಕ ಆಡಳಿತ ವ್ಯವಸ್ಥೆಯಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಭಾರತೀಶ್, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತಷ್ಟು ಚುರುಕುಗೊಳ್ಳದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದರು.

ಕೊಡಗಿನ ಜ್ವಲಂತ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರೊಂದಿಗೆ ಜಿಲ್ಲಾ ಬಿಜೆಪಿ ಚರ್ಚಿಸಿದೆ. ಜಿಲ್ಲೆ ಹಾಗೂ ರಾಜ್ಯದ ಸಂಸದರ ವಿಶೇಷ ಸಭೆ ನಡೆಸಿ ಆಯಾ ಪ್ರದೇಶಗಳ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ಸದಾನಂದಗೌಡರಿಂದ ದೊರೆತಿದೆ ಎಂದು ಭಾರತೀಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಾಂತೆಯಂಡ ರವಿ ಕುಶಾಲಪ್ಪ, ನಾಪಂಡ ರವಿ ಕಾಳಪ್ಪ, ರಾಬಿನ್ ದೇವಯ್ಯ, ವಿ.ಕೆ. ಲೋಕೇಶ್ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಕಾಳಚಂಡ ಅಪ್ಪಣ್ಣ ಉಪಸ್ಥಿತರಿದ್ದರು.