ಮಡಿಕೇರಿ, ಜೂ. 25: ಮಡಿಕೇರಿಯ ಯುವತಿ ದಿವ್ಯಜ್ಯೋತಿ (19) ನಿನ್ನೆ ದಿನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತಿರುವು ಪಡೆದಿದೆ. ಮಡಿಕೇರಿ ನಗರ ಪೊಲೀಸರ ತನಿಖೆಯಿಂದ ಈಕೆ ಯುವಕನೊಬ್ಬನ ಕಿರುಕುಳದಿಂದ ಬೇಸತ್ತು ನೊಂದು ಪ್ರಾಣಾರ್ಪಣೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ದಿವ್ಯಜ್ಯೋತಿ ಸಾವಿಗೂ ಮುನ್ನ ಬರೆದಿಟ್ಟಿದ್ದ ಮರಣ ಪತ್ರದಲ್ಲಿ ಈ ಕುರಿತು ಸ್ಪಷ್ಟ ಉಲ್ಲೇಖವಿರುವದಾಗಿ ಪೊಲೀಸರು ತಿಳಿಸಿದ್ದಾರೆ.ಮಡಿಕೇರಿಯ ಡೈರಿ ಫಾರಂನ ನಿವಾಸಿಯಾದ ದಿವ್ಯಜ್ಯೋತಿ ಕಳೆದ ಎರಡು ವರ್ಷಗಳಿಂದ ಪವನ್ ಎಂಬಾತನ ಜೊತೆಯೂ ಸಂಪರ್ಕ ಇರಿಸಿಕೊಂಡಿದ್ದಾಗಿ ಹೇಳಲಾಗಿದೆ. ಆದರೆ ಈ ನಡುವೆ ಆಕೆ ಇತ್ತೀಚೆಗೆ ಮತ್ತೋರ್ವ ಯುವಕ ಎಲೆಕ್ಟ್ರಿಷಿಯನ್ ಆಗಿರುವ ಬ್ರಿಜೇಶ್‍ನನ್ನು ರಿಜಿಸ್ಟರ್ ವಿವಾಹವಾಗಿದ್ದಳು. ಇದರಿಂದ ತೀವ್ರ ಆಕ್ರೋಶಗೊಂಡ ಈ ಯುವತಿಯ ಮೊದಲ ಪ್ರೇಮಿ ಪೈಂಟರ್ ವೃತ್ತಿಯಲ್ಲಿರುವ ಪವನ್ ಈಕೆಗೆ ಆಗಿಂದಾಗ್ಗೆ ಮಾನಸಿಕ ಹಿಂಸೆಕೊಟ್ಟು ಬ್ರಿಜೇಶ್‍ನ ಸಂಪರ್ಕ ಬಿಟ್ಟು ತನ್ನನ್ನು ವಿವಾಹವಾಗಲು ಒತ್ತಾಯಿಸುತ್ತಿದ್ದ ನೆನ್ನಲಾಗಿದೆ. ಈತನ ಕಿರುಕುಳ ಹೆಚ್ಚಾದಾಗ ಸಹಿಸಲು ಅಸಾಧ್ಯವಾಗಿ ಯುವತಿ ದಿವ್ಯಜ್ಯೋತಿ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಯುವತಿಯ ಸಾವಿಗೆ ಕಾರಣವಾದ ಆರೋಪಕ್ಕಾಗಿ ಪವನ್ ಎಂಬಾತನನ್ನು ಇಂದು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಯುವತಿ ವಿವಾಹವಾಗಿದ್ದ ಬ್ರಿಜೇಶ್‍ನಿಂದಲೂ ವಿವರ ಮಾಹಿತಿ ಪಡೆದಿದ್ದಾರೆ.