ಸೋಮವಾರಪೇಟೆ, ಜೂ. 25: ಬಡತನದಿಂದಾಗಿ ಹತ್ತನೇ ತರಗತಿ ವ್ಯಾಸಂಗದ ನಂತರ ಕೂಲಿ ಕೆಲಸಕ್ಕೆ ತೆರಳಿ ಪೋಷಕರಿಗೆ ಆಧಾರ ಸ್ತಂಭವಾಗಿದ್ದ ಯುವಕನೋರ್ವ ವಿಧಿಯಾಟಕ್ಕೆ ಸಿಲುಕಿ ಇದೀಗ ಹಾಸಿಗೆಯಲ್ಲೇ ದಿನದೂಡುತ್ತಿದ್ದಾನೆ.
ಸಮೀಪದ ಕಿಬ್ಬೆಟ್ಟ ಎಸ್ಟೇಟ್ನ ಲೈನ್ಮನೆಯಲ್ಲಿ ವಾಸವಿರುವ ಲಲಿತ ಮತ್ತು ಬಾಲಪ್ಪ ದಂಪತಿಯ ಪುತ್ರ ಭವನ್, ಕಾಫಿ ತೋಟದಲ್ಲಿ ಮರಕಸಿ ಮಾಡುತ್ತಿದ್ದ ಸಂದರ್ಭ ವಿಧಿಯಾಟಕ್ಕೆ ಸಿಲುಕಿದ್ದು, ಸುಮಾರು 60 ಅಡಿಗಳಷ್ಟು ಎತ್ತರದಿಂದ ಆಯತಪ್ಪಿ ಕೆಳಬಿದ್ದು, ಇದೀಗ ಹಾಸಿಗೆಯಲ್ಲೇ ದಿನದೂಡುವಂತಾಗಿದೆ.
22 ವರ್ಷ ಪ್ರಾಯದ ಭವನ್, ಕಳೆದ ಮೂರು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ಪೋಷಕರನ್ನು ಸಲಹುತ್ತಿದ್ದ. ಈ ಮಧ್ಯೆ ತಾಯಿ ಲಲಿತ ಅವರಿಗೆ ಹೃದಯದ ತೊಂದರೆ ಕಾಣಿಸಿಕೊಂಡ ಸಂದರ್ಭ ಶಸ್ತ್ರ ಚಿಕಿತ್ಸೆಗೆ ನೆರವಾಗಿದ್ದ. ತಾಯಿ ಇದೀಗ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲೇ ಭವನ್, ಮರದಿಂದ ಕೆಳಬಿದ್ದು, ಬೆನ್ನು ಮೂಳೆ ಮುರಿತಕ್ಕೊಳಗಾಗಿ ಜೀವನ್ಮರಣದ ನಡುವೆ ಹಾಸಿಗೆಯಲ್ಲಿ ಮಲಗಿದ್ದಾನೆ.
ಸ್ವಂತ ಮನೆಯೂ ಇಲ್ಲದೇ ಎಸ್ಟೇಟ್ನ ಲೈನ್ಮನೆಯಲ್ಲಿ ಸಂಸಾರ ಸಾಗಿಸುತ್ತಿದ್ದ ಬಾಲಪ್ಪ-ಲಲಿತ ಪೋಷಕರು ಮಗನ ಈ ಸ್ಥಿತಿಗೆ ದಿಕ್ಕುತೋಚದಂತಾಗಿದ್ದಾರೆ. ವೃದ್ಧಾಪ್ಯದಲ್ಲಿ ನಮ್ಮನ್ನು ಕೈಹಿಡಿಯುತ್ತಾನೆ ಎಂದು ನಂಬಿದ್ದ ಮಗನೇ ಹಾಸಿಗೆಯಲ್ಲಿ ಹೊರಳಾಡಲೂ ಆಗದ ಸ್ಥಿತಿಯಲ್ಲಿ ಮಲಗಿರುವದನ್ನು ಕಂಡು ಮರುಕಪಡುತ್ತಿದ್ದಾರೆ.
ಈತನ ಚಿಕಿತ್ಸೆಗೆ ಕೂಲಿ ಮಾಡಿ ಕೂಡಿಟ್ಟ ಹಣದಲ್ಲಿ ತೆಗೆದಿದ್ದ ಚಿನ್ನವನ್ನು ಮಾರಿದ್ದಾರೆ. ಅವರಿವರಲ್ಲಿ ಕಾಡಿಬೇಡಿ 3ಲಕ್ಷ ಹಣವನ್ನು ಹೊಂದಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 8.5.2019ರಂದು ಆಪರೇಷನ್ ಮಾಡಿಸಿದ್ದಾರೆ. ಬಡ್ಡಿಗೆ ಸಾಲವನ್ನು ಮಾಡಿ ಮಗನನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ಕುಟುಂಬಕ್ಕೆ ಬಡತನವೇ ಶಾಪವಾಗಿ ಪರಿಣಮಿಸಿದೆ.
ಪೋಷಕರಿಬ್ಬರಿಗೂ ಕೂಲಿ ಕೆಲಸ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಸಿಗುವ ಕೂಲಿ ಜೀವನ ಸಾಗಿಸಲಷ್ಟೇ ಸಾಕಾಗುತ್ತಿದ್ದು, ಮಗನ ಚಿಕಿತ್ಸೆ, ಔಷಧಿಗಳಿಗೆ ಹಣವಿಲ್ಲದಂತಾಗಿದೆ. ನೆಂಟರಿಷ್ಟರು, ಪರಿಚಯಸ್ಥರಿಂದ ಈಗಾಗಲೇ ಸಾಲ ಮಾಡಿ ಸುಸ್ತಾಗಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ಮುಂದಿನ ಚಿಕಿತ್ಸೆ ಮುಂದುವರೆಸಬೇಕಾಗಿದ್ದು, ಅಲ್ಲಿಗೆ ತೆರಳಲು ವಾಹನದ ಬಾಡಿಗೆ ಕಟ್ಟಲೂ ಸಹ ಈ ಕುಟುಂಬಕ್ಕೆ ಆಗುತ್ತಿಲ್ಲ. ಇದರೊಂದಿಗೆ ಚಿಕಿತ್ಸಾ ವೆಚ್ಚಕ್ಕೂ ಹಣ ಇಲ್ಲದಂತಾಗಿದೆ.
ಇಂತಹ ದಯನೀಯ ಸ್ಥಿತಿಯಲ್ಲಿರುವ ಕುಟುಂಬ ಇದೀಗ ಸಹೃದಯರ ನೆರವಿಗಾಗಿ ಮೊರೆಯಿಡುತ್ತಿದೆ. ಭವನ್ನ ಚಿಕಿತ್ಸೆ ಮತ್ತು ಔಷಧಿಗಳಿಗೆ ಲಕ್ಷಾಂತರ ರೂಪಾಯಿಯ ಅಗತ್ಯವಿದ್ದು, ಸಹೃದಯರು ಕೈಜೋಡಿಸಿದರೆ ಮಾತ್ರ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆತನ ತಾಯಿ ಲಲಿತ ಮನವಿ ಮಾಡಿದ್ದಾರೆ.
ಕೂಲಿ ಕಾರ್ಮಿಕ ಯುವಕನ ಚಿಕಿತ್ಸೆಗೆ ನೆರವಾಗಿ, ಕುಟುಂಬದ ಸಂಕಷ್ಟವನ್ನು ದೂರ ಮಾಡಲು ಬಯಸುವ ಸಹೃದಯರು, ಸೋಮವಾರಪೇಟೆಯಲ್ಲಿರುವ ಕರ್ನಾಟಕ ಬ್ಯಾಂಕ್ ಖಾತೆ, ಭವನ್ಕುಮಾರ್ ಟಿ.ಬಿ., ಖಾತೆ ಸಂಖ್ಯೆ 1382500101850901, ಐಎಫ್ಎಸ್ಸಿ ಸಂಖ್ಯೆ ಕೆಎಆರ್ಬಿ0000138, ಇಲ್ಲಿಗೆ ಸಹಾಯಧನ ಸಲ್ಲಿಸಬಹುದು.