ಮಡಿಕೇರಿ, ಜೂ. 25: ಪಂಚಾಯಿತಿಗೆ ಒಂದು ಸಹಕಾರ ಸಂಘ ಇರಬೇಕೆನ್ನುವ ಸರ್ಕಾರದ ಆದೇಶದಂತೆ ರಚನೆಯಾಗಿರುವ ಕುಂದಚೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಬೇಕಾದ ಆಸ್ತಿ ಮತ್ತು ಷೇರುಗಳನ್ನು, ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘ ವರ್ಗಾಯಿಸಿ ಕೊಡದೆ ಕಾರ್ಯ ಚಟುವಟಿಕೆಗಳಿಗೆ ಅಡಚಣೆ ಉಂಟು ಮಾಡುತ್ತಿದೆ ಎಂದು ಕುಂದಚೇರಿ ಸಂಘದ ಅಧ್ಯಕ್ಷÀ ಕೆ.ಎಸ್. ಕೀರ್ತಿಕುಮಾರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಗೆ ಈ ಹಿಂದೆ ಕುಂದಚೇರಿ, ಪದಕಲ್ಲು, ಸಿಂಗತ್ತೂರು, ಚೆರಂಡೇಟಿ ಗ್ರಾಮಗಳು ಒಳಗೊಂಡಿತ್ತು. ಆದರೆ ಸರ್ಕಾರದ ಆದೇಶದಂತೆ 2018ರ ಅಕ್ಟೋಬರ್ 25 ರಂದು ಕುಂದಚೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೋಂದಾವಣೆÉಗೊಂಡು ಕುಂದಚೇರಿ ಸೇರಿದಂತೆ ನಾಲ್ಕು ಗ್ರಾಮಗಳು ಭಾಗಮಂಡಲ ಸಂಘದಿಂದ ಬೇರ್ಪಟ್ಟು ಕುಂದಚೇರಿ ಸಂಘಕ್ಕೆ ಸೇರ್ಪಡೆಗೊಂಡಿತು ಎಂದು ತಿಳಿಸಿದರು.
ಕುಂದಚೇರಿ ಸಂಘ ಪ್ರಸ್ತುತ 230 ಸದಸ್ಯರುಗಳನ್ನು ಹೊಂದಿದೆ, ಇದರ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳ 400 ರಿಂದ 500 ಸದಸ್ಯರು ಭಾಗಮಂಡಲ ಸಂಘದಲ್ಲಿದ್ದು, ಅವರನ್ನು ಕುಂದಚೇರಿ ಸಂಘದ ಅಧೀನಕ್ಕೆ ಒಳಪಡಿಸಲು ಭಾಗಮಂಡಲ ಸಂಘ ಮುಂದಾಗುತ್ತಿಲ್ಲ. ಬದಲಾಗಿ ಕುಂದಚೇರಿ ವ್ಯಾಪ್ತಿಗೆ ಒಳಪಟ್ಟ ಸದಸ್ಯರುಗಳಿಗೆ ಪತ್ರ ಬರೆದು ತಪ್ಪು ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ತೊರೆನೂರು, ನಾಲ್ಕೇರಿ ಮತ್ತು ಪೆರಾಜೆ ಸಹಕಾರ ಸಂಘಗಳು ಸರ್ಕಾರದ ಆದೇಶದಂತೆ ಮೂಲ ಸಂಘÀದಿಂದ ಬಿಡುಗಡೆಗೊಂಡು ಅವುಗಳ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿದೆ. ಆದರೆ, ನೂತನವಾಗಿ ರಚಿಸಲ್ಪಟ್ಟ ಕುಂದಚೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹಲವು ತಿಂಗಳುಗಳು ಕಳೆದರೂ ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘÀ ಆಸ್ತಿ ಹಾಗೂ ಜವಾಬ್ದಾರಿಯನ್ನು ವರ್ಗಾಯಿಸಿ ಕೊಡದೇ ಇರುವ ಕಾರಣ ಸರಕಾರದ ಉದ್ದೇಶವನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಂದಚೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತನ್ನದೇ ಆದ ಬೈಲದೊಂದಿಗೆ ಆಡಳಿತ ಮಂಡಳಿಯನ್ನು ಹೊಂದಿದೆ. ಹೀಗಿದ್ದೂ ಸಂಘದ ಕಾರ್ಯವ್ಯಾಪ್ತಿಗೆ ಸೇರಿದ ಸದಸ್ಯರನ್ನು ಭಾಗಮಂಡಲ ಸಂಘ ಕುಂದಚೇರಿ ಸಂಘಕ್ಕೆ ವರ್ಗಾಯಿಸುವದಕ್ಕೆ ಬದಲಾಗಿ, ಅವರಿಗೆ ಪತ್ರ ಬರೆದು, ನೀಡಿರುವ ಕೃಷಿ ಸಾಲವನ್ನು ಬಡ್ಡಿ ಸಹಿತ 7 ದಿವಸದೊಳಗಾಗಿ ಮರು ಪಾವತಿ ಮಾಡಿ ನಿಮ್ಮ ಷೇರುಗಳನ್ನು ವರ್ಗಾಯಿಸಿಕೊಳ್ಳಿ ಎಂದು ಒತ್ತಾಯಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದರೊಂದಿಗೆ ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇರುವಂತೆ ನೋಟೀಸನ್ನು ತಯಾರು ಮಾಡಿ ಸಹಿಯನ್ನು ತೆಗೆದುಕೊಳ್ಳಲಾಗುತ್ತಿದೆ. ಇದು ಸಹಕಾರ ಸಂಘದ ನಿಯಮಗಳಿಗೆ ವಿರುದ್ಧವಾಗಿದೆ. ಭಾಗಮಂಡಲ ಸಂಘ ತನ್ನ ಧೋರಣೆಯನ್ನು ಬದಲಾಯಿಸಿಕೊಂಡು ನಿಯಮ ಪಾಲಿಸಲಿ ಎಂದು ಕೀರ್ತಿಕುಮಾರ್ ಒತ್ತಾಯಿಸಿದರು. ಕುಂದಚೇರಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಕಾರ್ಯ ವ್ಯಾಪ್ತಿಯ ಸದಸ್ಯರು ಭಾಗಮಂಡಲ ಸಂಘದ ಯಾವದೇ ಪತ್ರಕ್ಕೆ ಸಹಿ ಮಾಡದೆ ಸಹಕರಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಡಿ.ಇ. ಶ್ರೀಧರ್ ಹಾಗೂ ನಿರ್ದೇಶಕ ಕೆ.ಎಸ್. ಜಯಪ್ರಕಾಶ್ ಉಪಸ್ಥಿತರಿದ್ದರು.
 
						