ಮಡಿಕೇರಿ, ಜೂ. 25: ಅಯ್ಯಂಗೇರಿ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯನ್ನು ಪಂಚಾಯಿತಿ ಅಧ್ಯಕ್ಷ ಟಿ.ಎನ್. ಇಂದಿರಾ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಸಲಾಯಿತು.
ರೈತರ ಆತ್ಮಹತ್ಯೆ ಪ್ರಕರಣದ ಬಗ್ಗೆ, ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಬಗ್ಗೆ, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಕಾಮಗಾರಿಗಳಲ್ಲಿ 21 ಅಂಶಗಳಿಗೆ ಕ್ರಿಯಾ ಯೋಜನೆ ಬಗ್ಗೆ ಸಭೆ ಚರ್ಚಿಸಿತು. 14ನೇ ಹಣಕಾಸು ಯೋಜನೆಯಲ್ಲಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ಅರಿವು ಮೂಡಿಸಲು ಸರಕಾರದಿಂದ ಬೀದಿನಾಟಕಗಳನ್ನು ಏರ್ಪಡಿಸಲು ತೀರ್ಮಾನಿಸಲಾಯಿತು.
ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಹಾಗೂ ಯಾವದೇ ಬೆಳೆಗಳನ್ನು ಮಾರಾಟ ಮಾಡುವಾಗ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ರೈತರು ಬ್ಯಾಂಕ್ ಮತ್ತು ಸಹಕಾರ ಸಂಘ-ಸಂಸ್ಥೆಗಳಿಂದ ಸಾಲ ಪಡೆದು ಅತಿವೃಷ್ಟಿ - ಅನಾವೃಷ್ಟಿ ಆದಲ್ಲಿ ಸಾಲ ಮರುಪಾವತಿಗೆ ಒಂದು ವರ್ಷವಾದರೂ ಮುಂದೂಡಬೇಕು. ಭತ್ತಕ್ಕೆ ರೂ. 2 ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ತೀರ್ಮಾನಿಸಲಾಯಿತು.
ರಾಸಾಯನಿಕ ಗೊಬ್ಬರಗಳನ್ನು ಸಂಘ-ಸಂಸ್ಥೆಗಳ ಮುಖಾಂತರ ಸಹಾಯಧನ ರೂಪದಲ್ಲಿ ವಿತರಣೆ ಮಾಡುವಂತಾಗಬೇಕು. ಹಾಗೆಯೇ ಕೃಷಿ ಉಪಕರಣಗಳ ಸರಬರಾಜು ಆಗಬೇಕು. ಹಿಡುವಳಿದಾರರ ಸ್ವಾಧೀನದಲ್ಲಿರುವ ಆಸ್ತಿಯನ್ನು ಅವರವರ ಹೆಸರಿಗೆ ಪಹಣಿ ಸೇರ್ಪಡೆಯಾಗಬೇಕು. ಇಲಾಖಾವಾರು ಸೌಲಭ್ಯ ನೀಡುವಾಗ ಕನಿಷ್ಟ 100 ರಿಂದ 200 ಫಲಾನುಭವಿಗಳಿಗೆ ಆದರೂ ಸೌಲಭ್ಯ ಒದಗಿಸುವಂತೆ ಮಾಡಬೇಕು ಎಂದು ಸಭೆ ತೀರ್ಮಾನಿಸಿತು.
 
						