ಮಡಿಕೇರಿ ಜೂ. 24: ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಿಂದಲೇ ಶೈಕ್ಷಣಿಕ ಸಾಧನೆಯ ಗುರಿಯನ್ನಿಟ್ಟುಕೊಳ್ಳುವ ಮೂಲಕ ಸ್ವಪ್ರಯತ್ನದಿಂದ ಯಶಸ್ಸು ಸಾಧಿಸಬೇಕು ಎಂದು ಬೆಂಗಳೂರಿನ ಭಾರತ ಸ್ವ-ವೃತ್ತಿ ಸಂಸ್ಥೆಯ ಸಿ.ಇ.ಓ. ಕುಮಾರ್ ಕರೆ ನೀಡಿದ್ದಾರೆ.
ಸಂಸ್ಥೆಯ ವತಿಯಿಂದ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸುವ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮಾರ್ ಶಾಲಾ, ಕಾಲೇಜು ದಿನಗಳನ್ನು ಪರಿಪೂರ್ಣವಾಗಿ ಅನುಭವಿಸುವದ ರೊಂದಿಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಗುರಿಯನ್ನಿಟ್ಟು ಕೊಂಡು ಮುನ್ನಡೆಯಿರಿ ಎಂದು ಕರೆ ನೀಡಿದರು.
ಸಂಸ್ಥೆಯ ಸಿಒಒ ಪಂಚಾಕ್ಷರಿ ಮಾತನಾಡಿ, ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು ಪ್ರತಿವರ್ಷ ವಿದ್ಯಾರ್ಥಿಗಳಿಗೆ ಬ್ಯಾಗ್ನ್ನು ನೀಡುತ್ತಿದೆ. ಈ ಬಾರಿ ಜಿಲ್ಲೆಯ 24 ಶಾಲೆಗಳ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಗುವದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಂಘ, ಸಂಸ್ಥೆಗಳು ಕೈ ಜೋಡಿಸುವ ಅನಿವಾರ್ಯತೆ ಇದೆ ಎಂದರು. ವಿದ್ಯಾರ್ಥಿಗಳು ತಮಗೆ ಸಿಗುವ ನೆರವನ್ನು ಸದುಪಯೋಗ ಪಡಿಸಿ ಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮುವಂತೆ ಕರೆ ನೀಡಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಬ್ಯಾಗ್ಗಳನ್ನು ವಿತರಿಸಲಾಯಿತು. ಶಾಲೆಯ ಉಪ ಪ್ರಾಂಶುಪಾಲರಾದ ದೇವಮ್ಮ, ಬಿಎಸ್ಎಸ್ ಸಂಸ್ಥೆಯ ವ್ಯವಸ್ಥಾಪಕ ಮಧುಸೂದನ್ ಹಾಗೂ ಸಂಸ್ಥೆಯ ಪ್ರಮುಖರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.