ಕುಶಾಲನಗರ, ಜೂ. 24: ಕುಶಾಲನಗರ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಗೆ ಅಳವಡಿಸಲಾಗಿದ್ದ ಟ್ರಾಫಿಕ್ ಸಿಗ್ನಲ್ ಅನ್ನು ಇದೀಗ ಸ್ಥಗಿತಗೊಳಿಸಲಾಗಿದೆ.
ರಾಜ್ಯ, ನೆರೆ ರಾಜ್ಯಗಳಿಂದ ಕುಶಾಲನಗರದ ಮೂಲಕ ಸಾಗುವ ಹೆದ್ದಾರಿ ರಸ್ತೆಯ ಗಣಪತಿ ದೇವಾಲಯ ಬಳಿ 5 ರಸ್ತೆ ಕೂಡುತ್ತಿದ್ದು ಈ ಮೂಲಕ ಪಟ್ಟಣಗಳ ಬಡಾವಣೆಗಳಿಂದ ಬರುವ ವಾಹನಗಳಿಗೆ ಸಂಚರಿಸಲು ಸಿಗ್ನಲ್ನಿಂದ ತೊಂದರೆ ಉಂಟಾಗುತ್ತಿದೆ. ಅಲ್ಲದೆ ವಾಹನಗಳು ಅನಾವಶ್ಯಕ ನಿಂತು ಹೊರಡಬೇಕಾದ ಪರಿಸ್ಥಿತಿ ಕೂಡ ಸೃಷ್ಟಿಯಾಗಿತ್ತು. ಸರಕಾರಿ ಬಸ್ಗಳು ನಿಲ್ದಾಣಕ್ಕೆ ಬಂದು ಹೋಗುವ ಸಂದರ್ಭ ಇಲ್ಲಿನ ಸಂಚಾರಿ ನಿಯಮ ಸಂಪೂರ್ಣ ಏರುಪೇರಾಗುತ್ತಿರುವದು ಕೂಡ ಈ ಅವೈಜ್ಞಾನಿಕ ಸಿಗ್ನಲ್ ವ್ಯವಸ್ಥೆಗೆ ತೊಡಕು ಉಂಟುಮಾಡಿದೆ.
ಇದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದ್ದದನ್ನು ಗಮನಿಸಿ ಕಳೆದ ಕೆಲವು ದಿನಗಳಿಂದ ಸಂಚಾರಿ ಸಿಗ್ನಲ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿರುವದು ಕಂಡುಬಂದಿದೆ.
ಕುಶಾಲನಗರ ಸರಕಾರಿ ಬಸ್ ನಿಲ್ದಾಣದ ಎದುರುಗಡೆ ಹೆದ್ದಾರಿ ಸಂಪೂರ್ಣ ಕೆಸರುಮಯವಾಗಿದ್ದು ಇನ್ನೊಂದೆಡೆ ಖಾಸಗಿ ಬಸ್ಗಳು ಮತ್ತು ಮ್ಯಾಕ್ಸಿ ಕ್ಯಾಬ್ಗಳು ಹೆದ್ದಾರಿಯಲ್ಲೇ ನಿಲುಗಡೆಗೊಳ್ಳುತ್ತಿರುವದರಿಂದ ಪಟ್ಟಣದ ಹೃದಯ ಭಾಗ ಕಿಷ್ಕಿಂದೆಯಾಗಿ ಪರಿವರ್ತನೆಗೊಳ್ಳುತ್ತಿದೆ.
ತಳ್ಳುವ ಗಾಡಿಗಳು, ಆಟೋ ರಿಕ್ಷಾಗಳು ಎಲ್ಲೆಂದರಲ್ಲಿ ಕಂಡುಬರುತ್ತಿದ್ದು ಕಿರಿಕಿರಿ ಉಂಟಾಗುತ್ತಿರುವದು ದಿನನಿತ್ಯದ ದೃಶ್ಯವಾಗಿದೆ.
- ಚಂದ್ರಮೋಹನ್