ಕೂಡಿಗೆ, ಜೂ. 23: ಸೋಮವಾರಪೇಟೆ ವಲಯ ಅರಣ್ಯ ಇಲಾಖೆ ಹಾಗೂ ಬಾಣಾವರ ಉಪವಲಯ ವತಿಯಿಂದ ಶಾಲಾ ಮಕ್ಕಳಿಗೆ ಚಿಣ್ಣರ ವನದರ್ಶನ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತೊರೆನೂರು ಗ್ರಾ.ಪಂ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತ, ತಲ್ತಾರೆ ಶೆಟ್ಟಳ್ಳಿ ಗ್ರಾಮದ ಸುಗ್ಗಿ ದೇವರಕಾಡು, ಪುಷ್ಪಗಿರಿ ಬೆಟ್ಟದ ವನ್ಯಧಾಮ, ಸೋಮವಾರಪೇಟೆಯ ಹೊನ್ನಮ್ಮನ ಕೆರೆ ಮುಂತಾದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಶಾಂತಮಲ್ಲಿಕಾರ್ಜುನ ದೇವಾಲಯದ ಸಮೀಪವಿರುವ 860 ವರ್ಷ ಇತಿಹಾಸವುಳ್ಳ ದೊಡ್ಡ ಸಂಪಿಗೆ ಮರದ ಬಗ್ಗೆ ವಿವರಣೆ ನೀಡಿದರು. ಗ್ರಾಮಾಂತರ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಇಂತಹ ಪ್ರವಾಸದ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಭೌದ್ಧಿಕ ಜ್ಞಾನ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭ ಬಾಣಾವರ ಉಪವಲಯಾರಣ್ಯಾಧಿಕಾರಿ ಮಹದೇವ್ ನಾಯಕ್, ಉಪವಲಯಾಧಿಕಾರಿಗಳಾದ ಪುನೀತ್, ಶಶಿ, ಅರಣ್ಯ ವೀಕ್ಷಕ ಶ್ರೀಕಾಂತ್, ಶಾಲಾ ಮುಖ್ಯ ಶಿಕ್ಷಕಿ ಸುರೇಖಾ ಭಾಯ್ ಇದ್ದರು.