ಗೋಣಿಕೊಪ್ಪಲು, ಜೂ.24: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಲೆನಾಡು ಕಾಫಿ ಹಾಗೂ ಕಾಳು ಮೆಣಸು ಬೆಳೆಗಾರರ ಸಮಸ್ಯೆಗಳ ಬಗ್ಗೆ ಹಾಗೂ ಕೊಡಗು ಪುನರ್‍ನಿರ್ಮಾಣ, ಆನೆ ಮತ್ತು ಮಾನವ ಸಂಘರ್ಷ ತಪ್ಪಿಸುವ ಸಲುವಾಗಿ ವಿಶೇಷ ದುಂಡು ಮೇಜಿನ ಸಭೆಯು ಗೋಣಿಕೊಪ್ಪಲುವಿನ ಕಿತ್ತಳೆ ಬೆಳಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಜರುಗಿತು.ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯನ್ನು ರಾಜ್ಯ ರೈತ ಸಂಘದ ರಾಯಚೂರಿನ ಹಿರಿಯ ಗೌರವ ಅಧ್ಯಕ್ಷ ಚಾಮರಸ ಪಾಟೀಲ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಒಪಿಜಿಒ ಸಂಯೋಜಕ ವಿಶ್ವನಾಥ್ ಅವರು ಕೊಡಗು ಜಿಲ್ಲೆಯಲ್ಲಿ ವಾಸಿಸುವ ರೈತರು ಹಾಗೂ ಬೆಳೆಗಾರರು ಸಂಪೂರ್ಣ ಅರಣ್ಯವನ್ನು ಅತಿಕ್ರಮಣ ಮಾಡಿಕೊಂಡು ಕಾಡಿನಲ್ಲಿರುವ ಪ್ರಾಣಿಗಳನ್ನು ಓಡಿಸುತ್ತಿದ್ದಾರೆ. ಎಂಬ ಬಗ್ಗೆ ಕೇಂದ್ರ ಸರ್ಕಾರದಲ್ಲಿ ಬಲವಾದ ಸುಳ್ಳು ಮಾಹಿತಿಯ ಕಡತ ಅಧಿಕಾರ ಮಟ್ಟದಲ್ಲಿರುವದರಿಂದ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲು ಸತತವಾಗಿ ವಿಫಲರಾಗುತ್ತಿದ್ದೇವೆ. ಈ ಬಗ್ಗೆ ಕಾಫಿ ಬೆಳೆಗಾರರ

(ಮೊದಲ ಪುಟದಿಂದ) ಒಕ್ಕೂಟದಿಂದ ಕೇಂದ್ರದ ಅಧಿಕಾರಿಗಳನ್ನು ಭೇಟಿ ಮಾಡಿದ ಸಂದರ್ಭ ಇಂತಹ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ. ಈ ಬಗ್ಗೆ ನಾವುಗಳು ಇಲ್ಲಿಯ ನೈಜ್ಯ ಪರಿಸ್ಥಿತಿಯ ಬಗ್ಗೆ ವೈಜ್ಞಾನಿಕವಾಗಿ ಅಧಿಕೃತ ಮಾಹಿತಿಯನ್ನು ಲಿಖಿತವಾಗಿ ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದರು. ಜಿಲ್ಲೆಯಲ್ಲಿ ಅರೇಬಿಕಾ ಕಾಫಿ ವಿನಾಶದತ್ತ ಸಾಗುತ್ತಿದೆ. ರೈತರ ಸಮಸ್ಯೆಗಳನ್ನು ಬಗೆ ಹರಿಸುವತ್ತ ಚಿಂತಿಸಬೇಕಾಗಿದೆ. ಕಳೆದ ಆರು ವರ್ಷಗಳಿಂದ ಕಾಫಿಯು ಪ್ರಮುಖ ಬೆಳೆಯಾಗಿಯೂ, ಉಪ ಬೆಳೆಯಾಗಿ ಕರಿ ಮೆಣಸು ಮಾರುಕಟ್ಟೆಯನ್ನು ತಲುಪಿತ್ತು. ಇದೀಗ ಕಾಫಿಗೆ ಸೂಕ್ತ ಬೆಲೆ ಇಲ್ಲದೆ ಉಪ ಬೆಳೆಯಾಗಿದ್ದ ಕರಿ ಮೆಣಸು ಪ್ರಮುಖ ಬೆಳೆಯಾಗಿದೆ. ವಿಯೇಟ್ನಾಂ ದೇಶಕ್ಕೆ ಕರಿಮೆಣಸನ್ನು ಬೆಳೆಸುವ ರೀತಿಯನ್ನು ತೋರಿಸಿಕೊಟ್ಟ ಭಾರತ ದೇಶ ಇಂದು ಅವರಿಂದಲೇ ತೊಡಕನ್ನು ಅನುಭವಿಸುವಂತಾಗಿದೆ. ಈ ದೇಶದಲ್ಲಿ 5 ಪಟ್ಟು ಕಾಫಿ ಹಾಗೂ ಕರಿಮೆಣಸು ಬೆಳೆಸುತ್ತಿದ್ದಾರೆ. ವಿಯೇಟ್ನಾಂ ಕರಿಮೆಣಸು ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ಮೂಲಕ ಅಕ್ರಮವಾಗಿ ಭಾರತ ದೇಶವನ್ನು ಪ್ರವೇಶ ಮಾಡುತ್ತಿವೆ. ಈ ಬಗ್ಗೆ ಅಧಿಕೃತ ಮಾಹಿತಿಗಳು ಲಭ್ಯವಾಗಿದ್ದು, ದೊಡ್ಡ ಪ್ರಮಾಣದಲ್ಲಿ ಕಳ್ಳ ಸಾಗಾಣಿಕೆ ಮೂಲಕ ದೇಶವನ್ನು ಪ್ರವೇಶಿಸುತ್ತಿರುವ ಕರಿಮೆಣಸಿನಿಂದ ಇಲ್ಲಿಯ ನೈಜ್ಯ ಕರಿಮೆಣಸಿಗೆ ಸೂಕ್ತ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಯಾವದೇ ತೆರಿಗೆ ಇಲ್ಲದೆ ವಿಯೇಟ್ನಾಂನ ಕರಿಮೆಣಸು ನೇಪಾಳದಿಂದ ಬರಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಹೋರಾಟಗಳು ನಡೆಯಬೇಕು ಎಂದರು. ಕಾಫಿ ಹಾಗೂ ಕರಿಮೆಣಸಿನ ಸಮಸ್ಯೆಗಳನ್ನು ನೀಗಿಸಲು ಕೇಂದ್ರ ಮಟ್ಟಕ್ಕೆ ತಾಂತ್ರಿಕ ತಜ್ಞರ ತಂಡ ವರದಿ ನೀಡಿದ್ದಲ್ಲಿ ಪರಿಹಾರ ಕಾಣಬಹುದಾಗಿದೆ. ತಾಂತ್ರಿಕ ತಂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಕರಿಮೆಣಸು 24ನೇ ಬೆಳೆಯಾಗಿ ಗುರುತಿಸಿಕೊಂಡಿದ್ದರಿಂದ ಬೆಂಬಲ ಬೆಲೆಗೆ ಅವಕಾಶ ಸಿಕ್ಕಿದೆ. ಮೂರು ಕೋಟಿ ಜನಸಂಖ್ಯೆವುಳ್ಳ ಬೆಲ್ಜಿಯಂ ದೇಶದಲ್ಲಿ ಒಂದು ವರ್ಷಕ್ಕೆ ಪ್ರತಿ ನಾಗರಿಕ 12 ಕೆ.ಜಿ. ಕಾಫಿಯನ್ನು ಬಳಸುತ್ತಾನೆ; ಆದರೆ ಭಾರತ ದೇಶದಲ್ಲಿ ನೂರಾರು ಕೋಟಿ ಜನಸಂಖ್ಯೆ ಇದ್ದರೂ ಪ್ರತಿ ನಾಗರಿಕ ವರ್ಷಕ್ಕೆ ಕೇವಲ 70 ಗ್ರಾಂ. ಕಾಫಿಯನ್ನು ಬಳಸುತ್ತಿದ್ದಾನೆ. ಭಾರತದಲ್ಲಿ ಪ್ರತಿ ನಾಗರಿಕ ವರ್ಷಕ್ಕೆ 200 ಗ್ರಾಂ.ಕಾಫಿ ಬಳಸಿದ್ದಲ್ಲಿ ನಮ್ಮ ಕಾಫಿಗೆ ಉತ್ತಮ ಬೆಲೆ ನಿಗದಿಪಡಿಸಬಹುದು; ನಮ್ಮ ಕಾಫಿಯನ್ನು ನಾವೇ ಬಳಸಿದಂತಾಗುತ್ತದೆ. ಇದರಿಂದ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಉತ್ತಮ ಬೆಲೆ ಸಿಕ್ಕಿದಂತಾಗುತ್ತದೆ ಎಂದು ವಿಶ್ವನಾಥ್ ಕಾಫಿ ಹಾಗೂ ಕರಿಮೆಣಸಿನ ಬೆಲೆ ಸಮಸ್ಯೆಗಳ ಬಗ್ಗೆ ವಿವರ ನೀಡಿದರು.

ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಕೈಬುಲಿರ ಹರೀಶ್ ಮಾತನಾಡಿ ವಿಯೇಟ್ನಾಂ ಕರಿಮೆಣಸು ಮೊದಲಿಗೆ ದ.ಕೊಡಗಿನ ಗೋಣಿಕೊಪ್ಪಕ್ಕೆ ಆಗಮಿಸಿದ್ದು, ಇಲ್ಲಿಯ ಜನತೆಯ ದುರಂತಗಳಲ್ಲೊಂದು. ಈ ಬಗ್ಗೆ ಹೋರಾಟ ನಡೆಸಿದರೂ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ಕಾಫಿ ಮಂಡಳಿಯ ಅಧ್ಯಕ್ಷರು ಹಲ್ಲಿಲ್ಲದ ಹಾವಿನಂತಾಗಿದ್ದು ಕಾಫಿ ಮಂಡಳಿಯಿಂದ ಬೆಳೆಗಾರರಿಗೆ ಹಾಗೂ ರೈತರಿಗೆ ಯಾವದೇ ಪ್ರಯೋಜನವಾಗುತ್ತಿಲ್ಲ. 2002ರಲ್ಲಿ ಕಾಫಿಗೆ ಮೂರು ಸಾವಿರ ಬೆಲೆ ಇತ್ತು. ಆಗಿನ ಸಂದರ್ಭದಲ್ಲಿ ರಸಗೊಬ್ಬರ, ರೈತರ ಪರಿಕರಗಳಿಗೆ ಬೆಲೆಯೂ ಕಡಿಮೆ ಇತ್ತು. ಕಾರ್ಮಿಕರಿಗೆ ಹೆಚ್ಚೇನು ವೇತನ ಇರುತ್ತಿರಲಿಲ್ಲ. ಇದೀಗ 2018 ಕಳೆದರೂ ಕಾಫಿ ಬೆಲೆ ಇದೇ ರೀತಿಯಲ್ಲಿದೆ. ಆದರೆ ರಸಗೊಬ್ಬರ, ಪರಿಕರಗಳು ಸೇರಿದಂತೆ ಕಾರ್ಮಿಕರ ವೇತನವು 20 ಪಟ್ಟು ಅಧಿಕಗೊಂಡಿದೆ. ಇದರಿಂದ ರೈತರು ಸಂಕಷ್ಟಕ್ಕೆ ತಲುಪುವಂತಾಗಿದೆ. ಆನೆ ಮಾನವ ಸಂಘರ್ಷಕ್ಕೆ ಪರಿಹಾರವಾಗಿ ಆನೆಗಳಿಗೆ ಸಂತಾನ ಹರಣ ಮಾಡಬೇಕು. ಪುಂಡಾನೆಗಳನ್ನು ಹಿಡಿದು ಬೇರೆ ದೇಶಗಳಿಗೆ ಕಳುಹಿಸಿಕೊಟ್ಟಲ್ಲಿ ಇಲ್ಲಿಯ ರೈತರು ಜೀವನ ಸಾಗಿಸಬಹುದು. ರೈತರು ಪಡೆಯುವ ಕೃಷಿ ಪರಿಕರಗಳ ಮೇಲೆ ವಿಧಿಸಿರುವ ಶೇ.28ರ ಜಿಎಸ್‍ಟಿಯನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಯಚೂರಿನ ಹಿರಿಯ ಗೌರವ ಅಧ್ಯಕ್ಷ ಚಾಮರಸ ಪಾಟೀಲ್ ಕೃಷಿ ಸಾಲ ಸೇರಿದಂತೆ ರೈತರು ಪಡೆಯುವ ಸಾಲಕ್ಕೆ ಶೇ.4 ಬಡ್ಡಿ ದರದಲ್ಲಿ ನಿಗದಿಪಡಿಸಬೇಕು. ಸಾಲ ಮರುಪಾವತಿಸಲು ಹತ್ತು ವರ್ಷಗಳ ಸಮಯ ನೀಡಬೇಕು. ಹೋರಾಟಕ್ಕೆ ರೈತರು ಬೆಳೆಗಾರರು ಧುಮುಕಬೇಕು ಎಂದರು.

ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಕಾವೇರಪ್ಪ ಮಾತನಾಡಿ ಜಿಲ್ಲೆಯಲ್ಲಿ ಹೋರಾಟ ನಡೆಸಲು ಮುಂದೆ ಬರುವವರ ಸಂಖ್ಯೆ ಕಡಿಮೆ ನಮ್ಮಲ್ಲಿ ಒಗ್ಗಟ್ಟು ಮೂಡದಿರುವನ್ನು ಮತ್ತೊಬ್ಬರು ಲಾಭವಾಗಿ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಲ್ಲಿ ಅನೇಕ ನಿಬಂಧನೆಗಳನ್ನು ಅಳವಡಿಸುವದರಿಂದ ಯೋಜನೆಗಳು ರೈತರಿಗೆ ತಲುಪಲು ಕಷ್ಟವಾಗುತ್ತಿವೆ. ನಿಭಂದನೆಗಳನ್ನು ಸಡಿಲಗೊಳಿಸಬೇಕು. ಕಾಫಿ ಮಂಡಳಿಯಿಂದ ಈ ಹಿಂದೆ ನೀಡುತ್ತಿದ್ದಂತಹ ಯೋಜನೆಗಳು ಇದೀಗ ಮರೀಚಿಕೆಯಾಗಿವೆ. ಕಾಫಿ ಮಂಡಳಿ ಹಳೇ ಯೋಜನೆಯಂತೆ ಪ್ರಯೋಜನೆಗಳನ್ನು ರೈತರಿಗೆ ವಿತರಿಸಬೇಕು. ಕಾಫಿ ಮಾರಾಟಗಾರರ ಮೇಲೆ ಕಾಫಿ ಮಂಡಳಿ ನಿಯಂತ್ರಣ ಇಡಬೇಕು. ಬೆಳೆಗಾರರ ಶೋಷಣೆ ತಡೆಯಲು ಇದರಿಂದ ಅನುಕೂಲವಾಗಲಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ಮಲೆನಾಡು ಕಾಫಿ ಹಾಗೂ ಕಾಳು ಮೆಣಸು ಬೆಳೆಗಾರರ ಸಮಸ್ಯೆಗಳ ಬಗ್ಗೆ ದುಂಡು ಮೇಜಿನ ಸಭೆಯಲ್ಲಿ ಅನೇಕ ವಿಚಾರಗಳನ್ನು ಚರ್ಚಿಸಿ ಸಮಸ್ಯೆಗಳ ಬಗ್ಗೆ ಕೇಂದ್ರ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಪರಿಹಾರ ಕ್ರಮಗಳಿಗೆ ಒತ್ತಡ ಹೇರಲಾಗುವದು. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಆಗಿಂದ್ದಾಗ್ಗೆ ಸಭೆಗಳು, ಹೋರಾಟಗಳು, ನಡೆಯಬೇಕು ಎಂದರು.

ಬೆಳೆಗಾರರ ಒಕ್ಕೂಟದ ಸಲಹೆಗಾರ ಚೆಪ್ಪುಡೀರ ಸರಿ ಸುಬ್ಬಯ್ಯ ಮಾತನಾಡಿ ಆನೆಗಳು ಕಾಡಿನಿಂದ ನಾಡಿಗೆ ಬರುವ ಮೂಲಕ ಹೊಸ ಸಂದೇಶವನ್ನು ನೀಡುತ್ತಿದೆ. ಈ ಬಗ್ಗೆ ನಾವು ಗಂಭೀರವಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ. ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಇಲ್ಲಿಯ ರೈತ ಆರಂಭದಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದಾನೆ ಕೊಡಗಿನ 282 ಕಿ.ಮೀ. ಸುತ್ತಳತೆಯಲ್ಲಿ ರೈಲ್ವೆ ಬ್ಯಾರೀಕೇಡ್ ಅನ್ನು ಹಂತ ಹಂತವಾಗಿ ನಿರ್ಮಿಸಿದ್ದಲ್ಲಿ ರೈತರು ತಮ್ಮ ಬದುಕನ್ನು ಸುಧಾರಿಸಿಕೊಳ್ಳಬಹುದು ಎಂದರು. ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ದುಂಡು ಮೇಜಿನ ಸಭೆಯ ಮೂಲಕ ಇಲ್ಲಿಯ ರೈತರ, ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದೇವೆ. ಹಾಸನ, ಚಿಕ್ಕಮಗಳೂರು, ಸೇರಿದಂತೆ ಕೊಡಗಿನ ರೈತರು ಬೆಳೆಗಾರರು ಭಾಗವಹಿಸಿ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಮುಂದಿನ ಯೋಜನೆ ರೂಪಿಸಲಾಗುವದು ಎಂದರು.

ವೇದಿಕೆಯಲ್ಲಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಸನದ ಜಿ.ಟಿ.ರಾಮಸ್ವಾಮಿ, ರಾಜ್ಯ ಕಾರ್ಯದರ್ಶಿ ಮಂಗಳೂರಿನ ರವಿಕುಮಾರ್ ಪೂಣಚ್ಚ, ರಾಜ್ಯ ಕಾರ್ಯದರ್ಶಿ ಪಿ.ಗೋಪಾಲ್, ಮೂಡಿಗೆರೆಯ ಮಂಜುನಾಥ್, ಲೋಕರಾಜೇ ಅರಸ್, ಹೊಸೂರು ಕುಮಾರ್, ಕೊಡಗು ಜಿಲ್ಲಾ ಘಟಕದ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ,ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ,ಅಮ್ಮತ್ತಿ ಹೋಬಳಿ ಸಂಚಾಲಕ ಮಂಡೇಪಂಡ ಪ್ರವೀಣ್, ಪೊನ್ನಂಪೇಟೆಯ ಹೋಬಳಿ ಸಂಚಾಲಕ ಆಲೇಮಾಡ ಮಂಜುನಾಥ್, ಹುದಿಕೇರಿ ಹೋಬಳಿ ಸಂಚಾಲಕ ಚಂಗುಲಂಡ ಸೂರಜ್, ಸೇರಿದಂತೆ ಮುಖಂಡರುಗಳಾದ ಗಪ್ಪು ಗಣಪತಿ, ಪುಳ್ಳಂಗಡ ದಿನೇಶ್, ಮೇಚಂಡ ಕಿಶ,ಜಮ್ಮಡ ಮೋಹನ್, ಅಪ್ಪಚಂಗಡ ಮೋಟಯ್ಯ, ಕೋದೇಂಗಡ ಸುರೇಶ್, ಗಾಡಂಗಡ ಅಪ್ಪಣು,ಮುಂತಾದವರು ಭಾಗವಹಿಸಿದ್ದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಸ್ವಾಗತಿಸಿ ವಂದಿಸಿದರು.

-ಹೆಚ್.ಕೆ.ಜಗದೀಶ್