ಪೊನ್ನಂಪೇಟೆ, ಜೂ. 24: ಕೊಡವ ಮುಸ್ಲಿಮರ ಪ್ರಾತಿನಿಧಿಕ ಸಾಮಾಜಿಕ ಸಂಘಟನೆಯಾಗಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿ (ಕೆ.ಎಂ.ಇ.ಎಫ್.) ಯ ಸಹಯೋಗದಲ್ಲಿ ಪ್ರಸಕ್ತ ಸಾಲಿನಲ್ಲಿ ಜನಾಂಗದ 35 ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ‘ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2019’ ನೀಡಿ ಅವರನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಲಾಗುವದು ಎಂದು ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿ ಒಟ್ಟು 35 ವಿದ್ಯಾರ್ಥಿಗಳನ್ನು ಅವರು ಗಳಿಸಿರುವ ಅಂಕಗಳ ಆಧಾರದಲ್ಲಿ ಕೆ.ಎಂ.ಎ. ಪ್ರತಿಭಾ ಪುರಸ್ಕಾರಕ್ಕಾಗಿ ಆಯ್ಕೆಗೊಳಿಸಲಾಗಿದೆ. ಮುಂದಿನ ತಿಂಗಳ 7 ರಂದು ವೀರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವದು. ಜೊತೆಗೆ ಇದೇ ಸಂದರ್ಭದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್‍ನ 40ನೇ ವರ್ಷಾಚರಣೆಯ ಸಮಾರೋಪ ಸಮಾರಂಭವು ಜರುಗಲಿದೆ. 40ನೇ ವರ್ಷಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಜನಾಂಗದ ಮೂವರು ಸಾಧಕರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಗುವದು. ಅಲ್ಲದೆ ಕಿರಿಯ ವಯಸ್ಸಿನಲ್ಲಿಯೇ ಸಾಧನೆ ಮಾಡಿರುವ ಜನಾಂಗದ ಇಬ್ಬರು ಯುವ ಸಾಧಕರನ್ನು ಗುರುತಿಸಿ ಅವರಿಗೆ ಪ್ರಸಂಶನಾ ಮನ್ನಣೆ ನೀಡಿ ಗೌರವಿಸಲಾಗುವದು ಎಂದು ಅವರು ಮಾಹಿತಿ ನೀಡಿದ್ದಾರೆ

ಪ್ರತಿಭಾ ಪುರಸ್ಕಾರಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಸಲ್ಲಿಕೆಯಾಗಿದ್ದ ಸಾಕಷ್ಟು ಅರ್ಜಿಗಳನ್ನು ಪರಿಶೀಲಿಸಿದ ನಂತರ ಅರ್ಹ ಅರ್ಜಿಗಳಿಗೆ ಅಂಗೀಕಾರ ನೀಡಲಾಗಿದೆ. ಕಳೆದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕಗಳಿಸಿದ ತಲಾ 13 ಹಾಗೂ ಮದರಸಾ ವಿಭಾಗದ 5ನೇ, 7ನೇ ಮತ್ತು 10ನೇ ತರಗತಿಯಲ್ಲಿ ಉತ್ತಮ ಸಾಧನೆಗೈದ ತಲಾ ಮೂವರಿಗೆ ಸೇರಿದಂತೆ ಸಂಸ್ಥೆಯ ಸದಸ್ಯರ ಒಟ್ಟು 35 ಮಕ್ಕಳಿಗೆ ಈ ಬಾರಿಯ ‘ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2019’ ದೊರಕಲಿದೆ. ಕೆ.ಎಂ.ಎ. ಸದಸ್ಯರ ಮಕ್ಕಳನ್ನು ಶೈಕ್ಷಣಿಕವಾಗಿ ಉತ್ತೇಜಿಸುವ ಹಿನ್ನೆಲೆಯಲ್ಲಿ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಆಯ್ಕೆಗೊಂಡ 35 ವಿದ್ಯಾರ್ಥಿಗಳಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರದೊಂದಿಗೆ ಒಟ್ಟು 1.80 ಲಕ್ಷ ಮೊತ್ತದ ನಗದು ಬಹುಮಾನವನ್ನು ವಿತರಿಸಲು ಗುರುವಾರ ವೀರಾಜಪೇಟೆಯಲ್ಲಿ ನಡೆದ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಡಿ.ಹೆಚ್. ಸೂಫಿ ಅವರು ತಿಳಿಸಿದ್ದಾರೆ.

ಕೊಡವ ಮುಸ್ಲಿಮರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿಯಲು ಶಿಕ್ಷಣದ ಕೊರತೆ ಕಾರಣವಾಗಿತ್ತು. ಇಂದು ಪರಿಸ್ಥಿತಿ ಅಲ್ಪ ಸುಧಾರಣೆಯಾಗಿದ್ದರೂ ಸಕಾಲದಲ್ಲಿ ಉತ್ತಮ ಶಿಕ್ಷಣ ದೊರೆಯದ ಕಾರಣ ಸಾಕಷ್ಟು ಜನಾಂಗದ ಯುವಕರು ನಿರುದ್ಯೋಗಿಗಳಾಗಬೇಕಾಯಿತು. ಅಲ್ಲದೆ ಈ ಕಾರಣದಿಂದ ಜನಾಂಗದ ಹಲವಾರು ಪ್ರತಿಭಾನ್ವಿತರು ಗಮನಾರ್ಹ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಇಂದು ಜನಾಂಗದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿರುವದು ಉತ್ತಮ ಬೆಳವಣಿಗೆಯಾಗಿದೆ ಜನಾಂಗದ ವಿದ್ಯಾರ್ಥಿಗಳು ಸಂಸ್ಥೆಯ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂದು ತಿಳಿಸಿದ್ದಾರೆ.