ಸೋಮವಾರಪೇಟೆ, ಜೂ. 24: ಇಲ್ಲಿನ ರೋಟರಿ ಸಂಸ್ಥೆಯ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ತಾ. 25 ರಂದು (ಇಂದು) ಸಂಜೆ 7ಗಂಟೆಗೆ ಇಲ್ಲಿನ ಮಾನಸ ಸಭಾಂಗಣದಲ್ಲಿ ನಡೆಯಲಿದೆ ಎಂದು ನೂತನ ಸಾಲಿನ ಅಧ್ಯಕ್ಷ ಡಿ.ಪಿ. ರಮೇಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 25ರಂದು ಸಂಜೆ ನಡೆಯುವ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಕೌನ್ಸಿಲರ್ ಸೂರ್ಯಪ್ರಕಾಶ್ ಭಟ್ ಸೇರಿದಂತೆ ವಲಯ ರೋಟರಿ ಕ್ಲಬ್‍ಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಪ್ರಸ್ತುತ ಸೋಮವಾರಪೇಟೆ ರೋಟರಿ ಸಂಸ್ಥೆಯು 3181 ಜಿಲ್ಲಾ ಮಟ್ಟದಲ್ಲಿ ಉತ್ತಮ ಸೇವೆಗಳಿಗಾಗಿ 30 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಪ್ರಸಕ್ತ ವರ್ಷ ‘ಜೀವನ ಸಂಧ್ಯಾ ಮತ್ತು ಜೀವನ ರಕ್ಷಿಸು’ ಎಂಬ ಘೋಷ ವಾಕ್ಯದಡಿ ಸೇವೆಯನ್ನು ಮುಂದುವರೆ ಸಲಿದೆ ಎಂದು ತಿಳಿಸಿದರು.
ವೃದ್ಧಾಪ್ಯದ ಸಮಯದಲ್ಲಿ ಆತ್ಮಸ್ಥೈರ್ಯ ತುಂಬುವ ಮತ್ತು ಅಪಘಾತ ಸಂದರ್ಭ ಗಾಯಕ್ಕೀಡಾದ, ಮಾರಣಾಂತಿಕ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ತುರ್ತು ಸ್ಪಂದಿಸಿ ಜೀವ ರಕ್ಷಿಸುವ ಕಾರ್ಯಗಳಿಗೆ ರೋಟರಿ ಸಂಸ್ಥೆ ಈ ವರ್ಷ ಒತ್ತು ನೀಡಲಿದ್ದು, ವಿನೂತನ ಕಾರ್ಯಗಳನ್ನು ಹಮ್ಮಿಕೊಳ್ಳಲಿದೆ. ಇದರೊಂದಿಗೆ ಇತರ ಸಮಾಜಮುಖಿ ಸೇವೆಗಳು ಮುಂದುವರೆಯಲಿವೆ ಎಂದು ರಮೇಶ್ ಮಾಹಿತಿ ನೀಡಿದರು.
ಪ್ರಾಕೃತಿಕ ವಿಕೋಪ ಸಂದರ್ಭ ಸಂತ್ರಸ್ತರಾದ ಕೊಡಗಿನ 50 ಮಂದಿಗೆ ಮನೆ ನಿರ್ಮಿಸಿಕೊಡುವ ಭರವಸೆಯಂತೆ ಈಗಾಗಲೇ 25 ಮನೆಗಳನ್ನು ಹಸ್ತಾಂತರಿಸಲಾಗಿದೆ. ಉಳಿದ 25 ಮನೆಗಳ ನಿರ್ಮಾಣ ಕಾರ್ಯ ಸದ್ಯದಲ್ಲಿಯೇ ಪೂರ್ಣ ಗೊಳ್ಳಲಿದೆ. ಸೋಮವಾರಪೇಟೆ ಮತ್ತು ಶನಿವಾರಸಂತೆ ರೋಟರಿ ಕ್ಲಬ್‍ಗಳ ಆಶ್ರಯದಲ್ಲಿ ಬಜೆಗುಂಡಿಯಲ್ಲಿ ಎರಡು ಕುಟುಂಬಗಳಿಗೆ ಮನೆ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಪಿ.ಕೆ. ರವಿ, ರೋಟರಿ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸದಾನಂದ್, ಸಹಾಯಕ ರಾಜ್ಯಪಾಲ ಪಿ. ನಾಗೇಶ್, ರೋಟರಿ ಕಾರ್ಯದರ್ಶಿ ಹೆಚ್.ಸಿ. ಲೋಕೇಶ್, ಪದಾಧಿಕಾರಿ ಪ್ರಕಾಶ್ ಅವರುಗಳು ಉಪಸ್ಥಿತರಿದ್ದರು.