ಮಡಿಕೇರಿ, ಜೂ. 23: ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಮೇ ತಿಂಗಳ ಕೊನೆಯ ವಾರದಿಂದ ಆಗಸ್ಟ್ 19ರ ತನಕ ಎಡೆಬಿಡದೆ ಮಳೆ ಸುರಿಯುವದರೊಂದಿಗೆ ಪ್ರಾಕೃತಿಕ ವಿಕೋಪ ಎದುರಿಸಬೇಕಾಯಿತು. ಈ ಹಿಂದೆ ಯಾರೂ ಕಂಡು ಕೇಳರಿಯದ ಪರಿಸ್ಥಿತಿ ಎದುರಿಸುವಂತಾದರೆ, ಪ್ರಸಕ್ತ ಜೂನ್ ಕಡೆಯ ವಾರ ತಲಪಿದರೂ ವರುಣ ಜನತೆಯ ನಿರೀಕ್ಷೆಯಂತೆ ಗೋಚರಿಸಿಲ್ಲ. ಇಲ್ಲಿ ಹವಾಮಾನ ಇಲಾಖೆಯ ಲೆಕ್ಕಾಚಾರಗಳು ಕೂಡ ಈ ಬಾರಿ ತಲೆಕೆಳಗಾದಂತಾಗಿದೆ.

ವಾಡಿಕೆಯಂತೆ ಕೊಡಗಿನಲ್ಲಿ ಪ್ರಸಕ್ತ ಮುಂಗಾರುವಿನ ಹೊತ್ತು ಕೃತಿಕ, ರೋಹಿಣಿ, ಮೃಗಾಶಿರ ಮಳೆಗಳು ಕೈಕೊಟ್ಟರೆ, ಅನ್ನದಾತನಿಗೆ ವಚನಕೊಟ್ಟಿರುವ ನಂಬಿಕೆಯ ‘ಆದ್ರ್ರಾ ಮಳೆ’ ನಿನ್ನೆಯಿಂದ ಕಾಣಿಸಿಕೊಳ್ಳುವಂತಾಗಿದೆ. ಇಂದು ಮಧ್ಯಾಹ್ನ ಕೂಡ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಇತರೆಡೆಗಳಲ್ಲಿ ಆಶಾದಾಯಕವಾಗಿ ಮಳೆಯಾಗಿದೆ.

ಶ್ರೀಮಂಗಲ ವರದಿ: ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ, ಶ್ರೀಮಂಗಲ, ಬಿರುನಾಣಿ, ಹುದಿಕೇರಿ, ಕುಟ್ಟ, ಬಿ. ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಉತ್ತಮ ಮಳೆಯಾಗಿದೆ. ಇಂದು ಕೂಡ ಹಗಲಿನಲ್ಲಿ ಮಳೆಯಾಗಿದ್ದು, ಒಂದು ವಾರದಿಂದ ಈ ಪ್ರದೇಶಗಳಲ್ಲಿ ನಿತ್ಯ ಸರಾಸರಿ ಒಂದು ಇಂಚು ಮಳೆಯೊಂದಿಗೆ ಕೃಷಿ ಕಾಯಕಕ್ಕೆ ಆಶಾದಾಯಕ ವಾತಾವರಣ ಉಂಟಾಗಿದೆ. ದಕ್ಷಿಣ ಕೊಡಗಿನ ನದಿ ಪಾತ್ರಗಳಲ್ಲಿ ನೀರಿನ ಮಟ್ಟ ಏರತೊಡಗಿದೆ.

ಸರಾಸರಿ ಮಳೆ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 0.30 ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕು 0.28 ಇಂಚು, ವೀರಾಜಪೇಟೆ ತಾಲೂಕಿಗೆ 0.54 ಇಂಚು, ಸೋಮವಾರಪೇಟೆ ತಾಲೂಕಿಗೆ 0.08 ಇಂಚು ದಾಖಲಾಗಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ.

ಇನ್ನು ಮಡಿಕೇರಿ ಹೋಬಳಿಗೆ 0.59 ಇಂಚು, ನಾಪೋಕ್ಲು 0.28 ಇಂಚು, ಭಾಗಮಂಡಲ 0.25 ಇಂಚು ಮಳೆಯಾಗಿದೆ. ವೀರಾಜಪೇಟೆ 0.51 ಇಂಚು, ಹುದಿಕೇರಿ 0.59 ಇಂಚು, ಶ್ರೀಮಂಗಲ, ಪೊನ್ನಂಪೇಟೆಗೆ 0.79 ಇಂಚು, ಅಮ್ಮತ್ತಿ 0.35 ಹಾಗೂ ಬಾಳೆಲೆ 0.94 ಇಂಚು ಮಳೆಯಾಗಿದೆ.

ಶನಿವಾರಸಂತೆ 0.07, ಶಾಂತಳ್ಳಿ 0.08, ಕೊಡ್ಲಿಪೇಟೆ 0.04, ಕುಶಾಲನಗರ ಹಾಗೂ ಸುಂಟಿಕೊಪ್ಪ 0.16 ಇಂಚು ಸರಾಸರಿ ಮಳೆಯಾಗಿದೆ. ಪ್ರಸಕ್ತ ಹಾರಂಗಿ ಜಲಾಶಯದಲ್ಲಿ 2806.66 ಅಡಿ ನೀರಿದ್ದು, ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳಾಗಿವೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಮಳೆಯ ಹಿನ್ನೆಡೆಯಿಂದ ಬಹುತೇಕ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ. ಸಂಪಾಜೆ, ಶಾಂತಳ್ಳಿ, ಮೂರ್ನಾಡು, ನಾಪೋಕ್ಲು ಹೋಬಳಿಗಳಲ್ಲಿ ಭತ್ತದ ಕೃಷಿಗೆ ಪೂರಕ ಗದ್ದೆಗಳಿಗೆ ನೀರು ಸಾಲದೆ ಬಿತ್ತನೆ ಕಾರ್ಯಕ್ಕೂ ತೊಡಕು ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಉತ್ತರ ಕೊಡಗಿನ ಗ್ರಾಮೀಣ ಭಾಗಗಳಲ್ಲಿ ಸಸಿಮಡಿ ಸಿದ್ಧಗೊಳಿಸಿದ್ದು, ನೀರಿನ ಅಭಾವದಿಂದ ನಾಟಿ ಕಾರ್ಯಕ್ಕೆ ಸಮಸ್ಯೆ ಎದುರಾಗಿದೆ. ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿ ನಡುವೆ ಕೃಷಿ ಕಾಯಕಕ್ಕೆ ಸರಿಸುಮಾರು ಒಂದು ತಿಂಗಳ ಹಿನ್ನೆಡೆಯಾಗಿದೆ ಎಂದು ಅನುಭವಿ ಕೃಷಿಕರು ಅಸಹಾಯಕತೆ ಹೊರಗೆಡವಿದ್ದಾರೆ.