ವೀರಾಜಪೇಟೆ, ಜೂ. 24: ಮೂಲತ: ಕೇರಳದ ಬಡಗರದ ನಿವಾಸಿ ಹಾಗೂ ವೀರಾಜಪೇಟೆಯ ಹಿರಿಯ ವಕೀಲ ಸಿ.ಎಚ್.ಕರುಣಾಕರನ್ (91) ಅವರು ಇಂದು ನಿಧನ ಹೊಂದಿದರು.
ಅನಾರೋಗ್ಯದ ನಿಮಿತ್ತ ಕೆಲವು ದಿನಗಳಿಂದ ಬಡಗರದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮೃತರು ಪತ್ನಿ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ:25ರಂದು ಬೆಳಿಗ್ಗೆ 11 ಗಂಟೆಗೆ(ಇಂದು) ವೀರಾಜಪೇಟೆಯಲ್ಲಿ ನಡೆಯಲಿದೆ.
ವೀರಾಜಪೇಟೆ ನ್ಯಾಯಾಲಯಗಳಲ್ಲಿ ಸುಮಾರು 67 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿ ಈಗ ಕೆಲವು ದಿನಗಳಿಂದ ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದರು.
ಕಳೆದ 2000 ಇಸವಿಯಲ್ಲಿ ಕರುಣಾಕರನ್ ಅವರು ವಕೀಲ ವೃತ್ತಿಯಲ್ಲಿ 50 ವರ್ಷಗಳು ಪೊರೈಸಿದ್ದರಿಂದ ವೀರಾಜಪೇಟೆ ವಕೀಲರ ಸಂಘದಿಂದ ಇವರನ್ನು ಸನ್ಮಾನಿಸಲಾಗಿತ್ತು. ದಂತ ಚೋರ ವೀರಪ್ಪನ್ ಹಾಗೂ ಮಾಜಿ ಮುಖ್ಯಮಂತ್ರಿ ಆರ್.ಗುಂಡುರಾವ್ ಅವರ ಪರ ವಕಾಲತು ವಹಿಸಿದ್ದರು.
ವೀರಾಜಪೇಟೆ ಪುರಸಭೆಯ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ವೀರಾಜಪೇಟೆ ಲಯನ್ಸ್ ಕ್ಲಬ್ನ ಸಂಸ್ಥಾಪಕ ಅಧ್ಯಕ್ಷರಾಗಿ, ವಕೀಲರ ಸಂಘದ ಅಧ್ಯಕ್ಷರಾಗಿ, ಇಲ್ಲಿನ ಟೌನ್ ಬ್ಯಾಂಕ್ ನಿರ್ದೇಶಕರಾಗಿ, ಮುತ್ತಪ್ಪ ದೇವಸ್ಥಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.