ಮಡಿಕೇರಿ, ಜೂ. 23: ಮುಂಗಾರು ಮಳೆ ಶುರುವಾಯಿತು ಎಂದರೆ ದೈನಂದಿನ ಜೀವನದಲ್ಲಿ ಒಂದಿಷ್ಟು ಕಿರಿಕಿರಿ ತಪ್ಪದ್ದು. ಸಹಜವಾಗಿ ನಿತ್ಯೋಪಯೋಗಿ ವಸ್ತ್ರಗಳನ್ನು ಮಡಿಕೇರಿಯಂತಹ ಪಟ್ಟಣದಲ್ಲಿ ಒಣಗಿಸುವದೇ ತಲೆನೋವು; ಹೀಗಾಗಿ ಬಿದಿರಿನ ಬರ್ಜಿ ಹೊತ್ತು ತಾವಾಗಿಯೇ ಮನೆ ಬಾಗಿಲಿಗೆ ತಂದುಕೊಡುವವರಿದ್ದಾರೆ.

ಒಂದೊಮ್ಮೆ ಈತ ಹೇಳುವ ಹಣ ದುಬಾರಿ ಎನಿಸಿದರೂ; ಮಳೆಯ ನಡುವೆ ಬಟ್ಟೆಗಳನ್ನು ಒಣಗಿಸಲು ಇದು ಸಹಕಾರಿ. ಇದಕ್ಕೆ ಪೂರಕ ಕೆಂಡ ಅಣಿಗೊಳಿಸಿ ಇಟ್ಟುಕೊಳ್ಳಬೇಕಷ್ಟೇ.

ಜಾನಪದ ಶೈಲಿಯಲ್ಲಿ ಹೇಳುವದಾದರೆ ಬಿದಿರು ಬಹು ಉಪಕಾರಿ. ಮನುಷ್ಯನ ಹುಟ್ಟಿನಲ್ಲಿ ತೊಟ್ಟಿಲಾಗಿ ನೆರವಾದರೆ, ಸತ್ತಾಗ ಚಟ್ಟಕ್ಕೂ ಅನಿವಾರ್ಯ; ನಡುವೆ ಧಾನ್ಯ ಸೂಸಲು ಮೊರವಾದರೆ, ಅದೇ ಧಾನ್ಯರಾಶಿ ಕೂಡಿಡಲು ತಡಿಕೆಯೊಂದಿಗೆ; ಒಂದರಿ ಇತ್ಯಾದಿ ಬಹು ಉಪಕಾರ ನೀಡಲಿದೆ. ಇನ್ನು ಕಲಾವಿದನ ದನಿಗೆ ಕೊಳಲು ಸಹಿತ ಸರ್ವತ್ರ ಉಪಯೋಗಿ. ಎಳೆಯದರಲ್ಲಿ ಕಣಿಲೆ ರೂಪದಿ ಆಹಾರವಾದರೆ ಅನಿವಾರ್ಯವಾಗಿ ಬಲಿತಾಗ ಬಟ್ಟೆ ಒಣಗಿಸಲು ಓ ಬಿದಿರು ನೀ... ಸಹಕಾರಿ.

-ವೀಣಾ