ಶ್ರೀಮಂಗಲ, ಜೂ. 23: ರಾಜ್ಯ ಸರ್ಕಾರ ಸಹಕಾರ ಸಂಘ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡುವ ಯೋಜನೆ ಜಾರಿಗೊಳಿಸಿದ್ದರೂ, ಜಿಲ್ಲೆಯ ಬಹಳಷ್ಟು ರೈತರಿಗೆ ಈ ಸೌಲಭ್ಯ ಇನ್ನೂ ದೊರೆತಿಲ್ಲ. ಈ ಪ್ರಯೋಜನವು ಶೇ. 5 ರಿಂದ 8ರಷ್ಟು ರೈತರಿಗೆ ಮಾತ್ರ ಬಂದಿದ್ದು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಶೀಘ್ರ ಕ್ರಮಕೈಗೊಳ್ಳುವಂತೆ ಬಿರುನಾಣಿ ಗ್ರಾ.ಪಂ ಅಧ್ಯಕ್ಷ ಬಿ.ಕೆ. ನಾಣಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿರುವ ಅವರು; ಸಾಲ ಮನ್ನಾ ಪ್ರಕ್ರಿಯೆಯಿಂದ ಹೊಸ ಸಾಲ ದೊರೆಯುತ್ತಿಲ್ಲ. ಸುಸ್ತಿ ಸಾಲ ಮನ್ನಾ ಸಹ ಆಗಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕೊಡಗಿನ ರೈತರು ಬೆಳೆಯುವ ಬೆಳೆಗಳಿಗೆ ಮೋಡ ಬಿತ್ತನೆಯಿಂದ ಉಂಟಾಗುವ ಮಳೆಯಿಂದ ಹಾನಿಯಾಗಲಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಜನರು ಪಕ್ಷ ಭೇದ ಮರೆತು ಮೋಡ ಬಿತ್ತನೆ ವಿರುದ್ದ ಹೋರಾಟ ನಡೆಸಲು ಮುಂದಾಗಬೇಕೆಂದು ಕರೆ ನೀಡಿದ್ದಾರೆ.
ಬಿ.ಪಿ.ಎಲ್ ಅರ್ಹ ಫಲಾನುಭವಿಗಳಿಗೆ ಕಾರ್ಡ್ ಪ್ರಕ್ರಿಯೆ ಕೆಲವು ಗೊಂದಲದಿಂದ ಸ್ಥಗಿತವಾಗಿದೆ. ಈ ನಿಟ್ಟಿನಲ್ಲಿ ಅರ್ಹ ಫಲಾನುಭವಿಗಳಿಗೆ ದೊರೆಯಬೇಕಾದ ಸೌಲಭ್ಯ ವಂಚಿತವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೊಡಗಿಗೆ ಸೂಪರ್ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಆರಂಭಿಸಬೇಕೆನ್ನುವ ಅಭಿಯಾನಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.