ಮಡಿಕೇರಿ, ಜೂ. 24: ಪೊಲೀಸ್ ಸಿಬ್ಬಂದಿ ಯೊಬ್ಬರು ಕರ್ತವ್ಯಕ್ಕೆ ತೆರಳಿದ ವೇಳೆಯಲ್ಲಿ ಕಳ್ಳನೊಬ್ಬ ಬಾಗಿಲು ಮುರಿದು ಒಳನುಗ್ಗಿದ ಸಂದರ್ಭ ಅಕ್ಕಪಕ್ಕದವರ ಸಮಯ ಪ್ರಜ್ಞೆಯಿಂದ ಸೆರೆಯಾಗಿರುವ ಪ್ರಸಂಗವೊಂದು ನಡೆದಿದೆ.ನಗರದ ಹೌಸಿಂಗ್ಬೋರ್ಡ್ ಬಳಿ ಪೊಲೀಸ್ ವಸತಿ ಗೃಹದ, ಮಹಿಳಾ ಸಿಬ್ಬಂದಿ ಮನೆಗೆ ಹೊರ ಜಿಲ್ಲೆಯ ವ್ಯಕ್ತಿ ಪ್ರಕಾಶ್ ಎಂಬಾತ ಕಿಟಕಿ ಮುರಿದು ಒಳನುಗ್ಗಿರುವದಾಗಿ ತಿಳಿದುಬಂದಿದೆ. ಈತನ ಕೃತ್ಯವನ್ನು ಗಮನಿಸಿರುವ ಅಕ್ಕಪಕ್ಕದ ನಿವಾಸಿಗಳು ನಗರಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಈ ವೇಳೆ ಒಳನುಗ್ಗಿರುವ ಕಳ್ಳನ ಕೈಗೆ ಗಾಯವಾಗಿದ್ದು, ಈತ ವಸತಿಗೃಹದೊಳಗೆ ಬಿಂದಿಗೆ ನೀರಿನಿಂದ ಕೈ ತೊಳೆದುಕೊಂಡು; ಗಾಯಕ್ಕೆ ಅರಸಿನ ಪುಡಿ ಹಾಕಿ ಕೊಳ್ಳುವಷ್ಟರಲ್ಲಿ ಪೊಲೀಸರು ಧಾವಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಈತನ ಕೃತ್ಯಕ್ಕೆ ಸ್ಥಳೀಯ ಆರೋಪಿ ಸಂತೋಷ್ ಎಂಬಾತ ಕೂಡ ನೆರವಾಗಿದ್ದಲ್ಲದೆ, ಹಲವು ಕಳ್ಳತನ ಪ್ರಕರಣಗಳಲ್ಲಿ ಈ ಆರೋಪಿಗಳು ಪೊಲೀಸರಿಗೆ ಬೇಕಿದ್ದುದಾಗಿ ಗೊತ್ತಾಗಿದೆ. ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ. ಸುಮಾರು ಎಂಟು ಪ್ರಕರಣಗಳು ಬೆಳಕಿಗೆ ಬಂದಿದ್ದು, ವಿಚಾರಣೆ ನಡೆಯುತ್ತಿದೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ. -ಟಿ.ಜಿ.ಸತೀಶ್