ಸುಂಟಿಕೊಪ್ಪ, ಜೂ. 24: ಕಾಳುಮೆಣಸು ಫಸಲು ಕುಯ್ಲುಮಾಡಿ ಗೋದಾಮುವಿನಲ್ಲಿ ದಾಸ್ತಾನು ಇರಿಸಿದ್ದ ಬಗ್ಗೆ ಸುಳಿವು ಪಡೆದ ಕಳ್ಳರು; ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಕಳ್ಳತನ ಎಸಗಿರುವದು ಬೆಳಕಿಗೆ ಬಂದಿದೆ. ಆ ಮೇರೆಗೆ ಸುಂಟಿಕೊಪ್ಪ ಠಾಣೆಯ ಪೊಲೀಸರು ಕಳ್ಳತನದ ಮೆಣಸು ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಅಲ್ಲದೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಒಂದು ಕಾರು ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸು ವದರೊಂದಿಗೆ; ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕಲ್ಲೂರು ಗ್ರಾಮದ ಕಾಫಿ ಬೆಳೆಗಾರ ಸುನೀತ್ ಕುಮಾರಪ್ಪ ಅವರ ತೋಟದಲ್ಲಿ ಬೆಳೆದ ಕರಿಮೆಣಸನ್ನು ಕಟಾವುಗೊಳಿಸಿ ತಮ್ಮ ಗೆಸ್ಟ್‍ಹೌಸ್ ಕೆಳಭಾಗದಲ್ಲಿ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದರು. ತಂದೆ ಕುಮಾರಪ್ಪ ಅನಾರೋಗ್ಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಗಿತ್ತು. ತಾ. 3 ರಂದು ಪುನಃ ಮಂಗಳೂರಿಗೆ ತಂದೆಯವರನ್ನು ನೋಡಿಕೊಳ್ಳಲು ಹೋಗಿದ್ದು, ತಾ. 21ರಂದು ಬೆಳಿಗ್ಗೆ 11-30 ರ ವೇಳೆಗೆ ವಾಪಾಸ್ಸು ಬಂದು ಗೋದಾಮಿನ ಹತ್ತಿರ ತೆರಳಿ ನೋಡಿದಾಗ; ಗೋದಾಮಿನ ರೋಲಿಂಗ್ ಷಟರ್‍ಗೆ ಹಾಕಿದ್ದ ಬೀಗ ಇಲ್ಲದಿರುವದು ಕಂಡು ಬಂದಿದೆ. ಈ ಬಗ್ಗೆ ಸಂಶಯಗೊಂಡು ಗೋದಾಮಿನ ರೋಲಿಂಗ್ ಷಟಕ ತೆರೆದು ನೋಡಲಾಗಿ; ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ಕರಿಮೆಣಸಿನ ಚೀಲಗಳ ಪೈಕಿ 26 ಚೀಲಗಳನ್ನು ಯಾರೋ ಕಳವು ಮಾಡಿರುವದು ಗೋಚರಿಸಿದೆ. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ.42/2019 ಕಲಂ 454, 457,380 ಐಪಿಸಿ ರೀತ್ಯ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಿ. ನಿರ್ದೇಶನದಂತೆ ಸೋಮವಾರಪೇಟೆ ಉಪ ವಿಭಾಗದ ಉಪ ಅಧೀಕ್ಷಕ ಪಿ.ಕೆ.ಮುರುಳೀಧರ್ ರವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಬಿ.ಎಸ್. ದಿನೇಶ್ ಕುಮಾರ್, ಸುಂಟಿಕೊಪ್ಪ ಠಾಣಾಧಿಕಾರಿ ಎಸ್.ಎನ್. ಜಯರಾಮ್ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂದಿ ಗಳೊಂದಿಗೆ ನಾಕೂರು ಶಿರಂಗಾಲ ಗ್ರಾಮದ ಉದಯ (27)ತಂದೆ ಬಸಪ್ಪ, ವಿನೋದ (20)
(ಮೊದಲ ಪುಟದಿಂದ) ತಂದೆ ರಾಜು, ಟಿ.ಎಂ.ಸುಬ್ಬುರಾಜು ಆಲಿಯಾಸ್ ಸುಬ್ರಮಣಿ (35) ತಂದೆ ಟಿ.ಕೆ. ಮಾದವನ್ ಎಂಬವರುಗಳನ್ನು ಕರಿಮೆಣಸು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿಗಳು ಕಳವು ಗೊಳಿಸಿದ ರೂ. 2.25 ಲಕ್ಷ ಮೌಲ್ಯದ 7 ಕ್ವಿಂಟಲ್ ಕರಿಮೆಣಸನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ ಮಾರುತಿ 800 ಹಾಗೂ ಅಪಾಚಿ ದ್ವಿಚಕ್ರ ವಾಹನವನ್ನು ವಶಪಡಿಸಿ ಕೊಂಡು ಮೂವರು ಆರೋಪಿಗಳನ್ನು ನ್ಯಾಯಾಲಕ್ಕೆ ಹಾಜರುಪಡಿಸಿಲಾಯಿತು.
ಈ ಕಾರ್ಯಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಯು.ಎ.ಸತೀಶ್, ಬಿ.ವಿ.ಹರೀಶ್ ಕುಮಾರ್, ಪುನೀತ್ ಕುಮಾರ್, ಅಭಿಲಾಷ್, ವಿಜಯ ಕುಮಾರ್, ಖಾದರ್, ಮಂಜುನಾಥ್, ಸುದೀಶ ಕುಮಾರ್, ಎ.ಆರ್. ಗಣೇಶ್, ರವಿ, ಅಬ್ದುಲ್ ರೆಹಮಾನ್, ಸಂಪತ್ ಕುಮಾರ್, ಪ್ರಶಾಂತ್ ಪಾಲ್ಗೊಂಡಿದ್ದರು.