ಮಡಿಕೇರಿ, ಜೂ. 24: ಕರ್ನಾಟಕ ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರ ನಿರ್ದೇಶನದಂತೆ ಇಂದಿನಿಂದ ರಾಜ್ಯದೆಲ್ಲೆಡೆ ಆರಂಭಗೊಂಡಿರುವ ಕಡತ ವಿಲೇವಾರಿ ಸಪ್ತಾಹ ಕೊಡಗು ಜಿಲ್ಲೆಯಲ್ಲಿಯೂ ಆರಂಭವಾಗಿದ್ದು, ಅಧಿಕ ಸಂಖ್ಯೆಯ ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.ಕಂದಾಯ ಇಲಾಖೆಯ ವಿವಿಧ ಹಂತದಲ್ಲಿ ಇದುವರೆಗೆ ಇತ್ಯರ್ಥ ಗೊಳ್ಳದೆ ಉಳಿದಿರುವ ಸುದೀರ್ಘ ಸಮಯದ ಕಡತಗಳಿಗೆ ಮುಕ್ತಿ ದೊರಕಿಸುವ ದಿಸೆಯಲ್ಲಿ ಈ ಸಪ್ತಾಹಆರಂಭಿಸಲಾಗಿದೆ.ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕುಗಳ ಕಂದಾಯ ಕಚೇರಿಗಳು ಹಾಗೂ ಇತರ ಹೋಬಳಿ ಕಚೇರಿಗಳಲ್ಲಿ ಕೂಡ ಸಂಬಂಧಿಸಿದ ಇಲಾಖೆಗೆ ಬರು ವಂತಹ ವಿವಿಧ ಹಂತದ ಕಡತಗಳನ್ನು ಇಂದಿನಿಂದ ಪರಿಶೀಲಿಸಲಾಗುತ್ತಿದೆ. ಅಲ್ಲದೆ ಈ ಪೈಕಿ ಇತ್ಯರ್ಥಗೊಳಿಸಲು ಸಾಧ್ಯವಿರುವ ಕಡತಗಳನ್ನು ಆಯಾ ಸ್ಥರದ ಅಧಿಕಾರಿಗಳು ಸರಿಪಡಿಸಲಿದ್ದು, ಕಾನೂನಿನ ತೊಡಕುಗಳಿರುವ ಕಡತಗಳನ್ನು ಸಾರ್ವಜನಿಕರಿಂದ ಮೇಲಿನ ಅಧಿಕಾರಿಗಳಿಗೆ ವರ್ಗಾಯಿಸಲು ಕ್ರಮಕೈಗೊಳ್ಳಲಾಗಿದೆ.
ಹೀಗೆ ತಾಲೂಕು ತಹಶೀಲ್ದಾರ್ ಹಂತದಲ್ಲಿ ಇತ್ಯರ್ಥಗೊಳಿಸಲು ಸಾಧ್ಯವಿರುವ ಪ್ರಕರಣಗಳಿಗೆ ಮುಕ್ತಿ ದೊರಕಲಿದ್ದು, ಅಲ್ಲಿಯೂ ಇತ್ಯರ್ಥಗೊಳಿಸಲು ಆಗದಿದ್ದರೆ, ಉಪ ವಿಭಾಗಾಧಿಕಾರಿಗಳಿಗೆ ವರ್ಗಾವಣೆ ಗೊಳ್ಳಲಿದೆ. ಮುಂದೆ ಉಳಿಯುವ ಕಡತಗಳನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ಪರಿಶೀಲಿಸಿ ಅಗತ್ಯ ಕ್ರಮವಹಿಸಲಾಗುತ್ತದೆ.
ಜಿಲ್ಲಾಧಿಕಾರಿ ಹಂತದಲ್ಲಿ ಬಗೆಹರಿ ಯದ ಕಡತಗಳನ್ನು ಮೇಲಾಧಿಕಾರಿಗಳ ಶಿಫಾರಸ್ಸು ಮೇರೆಗೆ ಸರಕಾರಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಅವರು ಖಚಿತಪಡಿಸಿದ್ದಾರೆ. ಅನೇಕ ಹಳೆಯ ಪ್ರಕರಣಗಳ ಸಂಬಂಧ ಮೊದಲನೆಯ ದಿನವಾದ ಇಂದು ಮಡಿಕೇರಿ ತಾಲೂಕು ತಹಶೀಲ್ದಾರ್ ಕಚೇರಿ, ಸೋಮವಾರ ಪೇಟೆ ಮತ್ತು ವೀರಾಜಪೇಟೆ ತಹಶೀಲ್ದಾರ್ ಕಚೇರಿಗಳ ಸಹಿತ ಹೋಬಳಿ ಕಂದಾಯ ಕಚೇರಿಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಸಾರ್ವಜನಿಕರು ತಮ್ಮ ತಮ್ಮ ಹಳೆಯ ಕಡತಗಳೊಂದಿಗೆ ವಿಳಂಬ ಗೊಂಡಿರುವ ಅಂಶಗಳ ಬಗ್ಗೆ ಆಯಾ ಅಧಿಕಾರಿಗಳ ಹಂತದಲ್ಲಿ ಸೂಕ್ತ ಮಾಹಿತಿಯೊಂದಿಗೆ, ವಿವರಣೆ ನೀಡಲು ಅನುವು ಮಾಡಿ ಕೊಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಬಾಕಿ ಉಳಿದಿರುವ ಇಂತಹ ಪ್ರಕರಣಗಳ ಸಮರ್ಪಕ ಮಾಹಿತಿಯ ವರದಿ ಸಂಗ್ರಹಿಸುತ್ತಿರುವದಾಗಿಯೂ ಜಿಲ್ಲಾಧಿಕಾರಿ ಖಚಿತಪಡಿಸಿದ್ದಾರೆ. ತಾ. 30ರ ತನಕ ಕಡತಗಳನ್ನು ಪರಿಶೀಲನೆ ಯೊಂದಿಗೆ ಭಾನುವಾರ ಕೂಡ ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.